ಬೆಂಗಳೂರು : ನಗರದ ಚಂದ್ರಾಲೇಔಟ್‌ನ ವಿದ್ಯಾಸಾಗರ್ ಶಾಲೆಯ ಮುಂದೆ ನಡೆದ ಪ್ರತಿಭಟನೆಗೆ ಹಿಜಾಬ್ ಕಾರಣವಲ್ಲ. ಎಲ್ಲರನ್ನೂ ಪೊಲೀಸ್ ಸಿಬ್ಬಂದಿ ಸಮಾಧಾನ ಮಾಡಿ ಕಳುಹಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ದಕ್ಷಿಣ ಬೆಂಗಳೂರಿನ ಚಂದ್ರಾಲೇಔಟ್‌ನ ವಿದ್ಯಾಸಾಗರ್ ಶಾಲೆಯ ಬಳಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆಯ ಕುರಿತು ಕಮಲ್ ಪಂತ್ ರಾಜಾಜಿನಗರದ ಸಂಚಾರ ಸಂಪರ್ಕ ದಿವಸದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಹೈಕೋರ್ಟ್ ಆದೇಶ ಏನಿದೆ ಎಂಬುದರ ಬಗ್ಗೆ ತಿಳಿ ಹೇಳಿದ್ದೇವೆ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದೇವೆ. ಹಿಜಾಬ್ ಸಂಬಂಧ ಯಾರೂ ಪರ ಮತ್ತು ವಿರೋಧ ಪೋಸ್ಟ್ ಮಾಡಬಾರದು. ಪ್ರಚೋದನಾತ್ಮಕ ಯಾವುದೇ ಪೋಸ್ಟ್ ಕುರಿತು ದೂರು ಕೊಟ್ಟರೆ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
ತುಮಕೂರು ರಸ್ತೆ ಫ್ಲೈ ಓವರ್ ಸದ್ಯಕ್ಕೆ ಓಪನ್ ಇಲ್ಲ: ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಬಂದ್ ಆಗಿರುವ ತುಮಕೂರು ರಸ್ತೆ ಫ್ಲೈ ಓವರ್ ಸದ್ಯಕ್ಕೆ ಓಪನ್ ಆಗುವುದಿಲ್ಲ. ದೆಹಲಿಯ ಅನ್ ತಜ್ಞರಿಂದ ಫ್ಲೈಓವರ್ ಓಪನ್ಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ವಾರದ ಆರಂಭದಲ್ಲಿ ಫ್ಲೈ ಓವರ್ ಮೇಲೆ ಲೋಡ್ ಟೆಸ್ಟಿಂಗ್ ನಡೆಸಲಾಗಿತ್ತು. ಇದೇ ವೇಳೆ ದೆಹಲಿಯಿಂದ ತಜ್ಞರ ತಂಡ ಆಗಮಿಸಿ ಫ್ಲೈ ಓವರ್ ಪರಿಶೀಲಿಸಿದ್ದಾರೆ. ಫ್ಲೈ ಓವರ್ ಅನ್ನು ವಾಹನ ಸಂಚಾರಕ್ಕೆ ಓಪನ್ ಮಾಡಲು ಅನುಮತಿ ನೀಡಿಲ್ಲ. ಪೊಲೀಸರು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದಾರೆ. ಫ್ಲೈ ಓವರ್ ಓಪನ್ ಆಗುವವರೆಗೆ ಸಾರ್ವಜನಿಕರು ಮತ್ತು ವಾಹನ ಸವಾರರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದ : ಶಾಸಕ ರಘುಪತಿ ಭಟ್‌ಗೆ ಬೆದರಿಕೆ ಕರೆ ಬರ್ತಿವೆಯಂತೆ