ಬೆಂಗಳೂರು: ಕೊರೊನಾ ಸೋಂಕು ತಗುಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಪುಲಕೇಶಿನಗರ ಸಂಚಾರಿ ಠಾಣೆ ಹೆಡ್ ಕಾನ್ಸ್ಟೇಬಲ್ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಯಲಹಂಕದ ನಿವಾಸಿಯಾಗಿರುವ ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ದೃಢಪಟ್ಟತ್ತು. ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರೀಗ ಗುಣಮುಖರಾಗಿದ್ದು, ವೈದ್ಯರ ಸೂಚನೆಯಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಡಿಸ್ಚಾರ್ಜ್ ಆದ ಹೆಡ್ ಕಾನ್ಸ್ಟೇಬಲ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೇತೃತ್ವದ ತಂಡ ರೆಡ್ ಕಾರ್ಪೆಟ್ ಹಾಸಿ ಡ್ರಮ್ ಬ್ಯಾಂಡ್ ಬಾರಿಸಿ, ಹೂವುಗಳನ್ನು ಸುರಿದು ಸ್ವಾಗತಿಸಿದರು.
ಮೇ 20ರಂದು ಫ್ರೇಜರ್ ಟೌನ್ ಟ್ರಾಫಿಕ್ ಠಾಣಾ ಸಿಬ್ಬಂದಿಗೆ ಪರೀಕ್ಷೆ ಮಾಡಿಸಲಾಗಿತ್ತು. ಮೇ 22ರಂದು ಬಂದ ಪರೀಕ್ಷಾ ವರದಿಯಲ್ಲಿ ಹೆಡ್ ಕಾನ್ಸ್ಟೇಬಲ್ಗೆ ಸೋಂಕು ದೃಢಪಟ್ಟಿತ್ತು. ಬಳಿಕ ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಇವರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.