ಬೆಂಗಳೂರು: ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಮೇಲೆ ಉತ್ತರ ಪ್ರದೇಶ ಪೊಲೀಸರ ದೌರ್ಜನ್ಯ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಭವನದಿಂದ ಆನಂದ್ ರಾವ್ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸಿದರು. ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಹೆಣ್ಣುಮಗುವೊಂದು ಆಸ್ಪತ್ರೆಯಲ್ಲಿ ಮೃತಳಾಗಿದ್ದಾಳೆ. ಮಗಳ ಮುಖ ನೋಡಲು ಪೋಷಕರಿಗೆ ಯುಪಿ ಸರ್ಕಾರ ಬಿಡದೇ ಇರುವುದು ಹೀನಾಯವಾದ ಕೃತ್ಯ ಎಂದು ವಾಗ್ದಾಳಿ ನಡೆಸಿದರು.
ಹೆಣ್ಣುಮಗುವಿನ ಮನೆಗೆ ಹೋಗಿ ಸಾಂತ್ವಾನ ಹೇಳಲು ನಮ್ಮ ನಾಯಕರು ಹೋಗಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ. ರಾಹುಲ್ ಗಾಂಧಿ ಮೇಲೆ ಪೋಲೀಸರು ದೌರ್ಜನ್ಯ ಮಾಡಿದ್ದಾರೆ. ಇದನ್ನು ಪ್ರಜಾಪ್ರಭುತ್ವ ಅಂಥ ಕರೆಯಬೇಕೋ?. ಅರಾಜಕತೆ ಅಂಥ ಕರೆಯಬೇಕೋ ಗೊತ್ತಾಗುತ್ತಿಲ್ಲ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ರಾಹುಲ್ ಗಾಂಧಿಯನ್ನು ಹೋಗಲು ಬಿಡದೇ ಇರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಕಿಡಿ ಕಾರಿದರು.
ಯೋಗಿ ಸರ್ಕಾರ ರೋಗಿ ಸರ್ಕಾರ: ಯೋಗಿ ಸರ್ಕಾರ ರೋಗಿ ಸರ್ಕಾರ ಆಗಿದೆ. ದಲಿತ ಯುವತಿ ಮೇಲಿನ ಆತ್ಯಾಚಾರ ನಮ್ಮ ಮನುಕುಲಕ್ಕೆ ಅಪಮಾನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.
ರಾಷ್ಟ್ರೀಯ ನಾಯಕರಿಗೆ ಭೇಟಿ ನೀಡಲು ಅವಕಾಶ ನೀಡಲಿಲ್ಲ. ಅವರು ಮಾನವೀಯತೆ ದೃಷ್ಟಿಯಿಂದ ನೊಂದವರಿಗೆ ಸಾಂತ್ವಾನ ಹೇಳಲು ಹೋದ ರಾಷ್ಟ್ರೀಯ ನಾಯಕರಿಗೆ ಅವಕಾಶ ಕೊಟ್ಟಿಲ್ಲ. ರಾಷ್ಟ್ರೀಯ ನಾಯಕರು ನಮ್ಮ ನಾಯಕರ ಜೊತೆ ನಡೆದು ಕೊಂಡ ರೀತಿ ಜನಸಾಮಾನ್ಯರಿಗೆ ನೀವು ತೋರಿಸುತ್ತಿರುವ ಗೌರವವಾಗಿದೆ. ಇದನ್ನು ಖಂಡಿಸುತ್ತೇವೆ. ಇದಕ್ಕೆ ದೇಶದ ಜನ ಉತ್ತರವನ್ನು ಮುಂದಿನ ದಿನಗಳಲ್ಲಿ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರನ್ನು ವಶಕ್ಕೆ ಪಡೆದ ಪೊಲೀಸರು: ಪ್ರತಿಭಟನಾ ಮೆರವಣಿಗೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಡಿಕೆಶಿ ಯುಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನೂರಾರು ಕೈ ಕಾರ್ಯಕರ್ತರು ಭಾಗಿಯಾಗಿದ್ದರು.