ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು ಇದರಿಂದ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು ಸಿಲಿಕಾನ್ ಸಿಟಿಯಲ್ಲಿ ಬಾಲ ಬಿಚ್ಚಿದ ರೌಡಿಗಳಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ.
ನಿನ್ನೆ ಪಶ್ಚಿಮ ವಿಭಾಗದ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ ಪೊಲೀಸರು, ಇಂದು ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪುಡಿ ರೌಡಿಗಳಿಗೆ ಠಕ್ಕರ್ ಕೊಟ್ಟಿದ್ದಾರೆ.
ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ಗಳ ತಂಡ ಮಾಗಡಿ ರೋಡ್ ಮತ್ತು ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯ ಪ್ರಮುಖ ರೌಡಿಶೀಟರ್ಗಳಾದ ಅಮೀರ್ ಪಾಷ, ವಿಜಯ್, ವೇಣುಗೋಪಾಲ, ವೆಂಕಟೇಶ್ ಕುಮಾರ್, ಸ್ಟೀಪನ್ ಮತ್ತು ಗೋಪಾಲ್ ಸೇರಿದಂತೆ 45 ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ನಗರದಲ್ಲಿ ಆಕ್ಟಿವ್ ಆಗಿರುವ ರೌಡಿಗಳಿಗೆ ಸಾಥ್ ನೀಡುತ್ತಿರುವ ಪುಡಿ ರೌಡಿಗಳ ಮನೆ ಮೇಲೆ ಸಹ ದಾಳಿ ನಡೆಸಲಾಗಿದೆ.