ಬೆಂಗಳೂರು: ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಹಾಗೆ, ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಮುಷ್ಕರದಿಂದ ಸಾರ್ವಜನಿಕರು ಹೈರಾಣಾಗಿರುವುದು ಸುಳ್ಳಲ್ಲ.
ಸಾರಿಗೆ ನೌಕರರು ಆರನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದಿದ್ದು, ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಅನಿರ್ದಿಷ್ಟಾವದಿ ಮುಷ್ಕರ ನಡೆಸುತ್ತಿದ್ದಾರೆ. ಇಂದು ನೌಕರರ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಾಲೂಕು ಹಾಗೂ ಜಿಲ್ಲಾ ಕಚೇರಿ ಎದುರು ತಟ್ಟೆ ಲೋಟ ಚಳವಳಿ ನಡೆಸಿದ್ದಾರೆ.
ಆದರೆ, ಇಂದಿನ ತಟ್ಟೆ ಲೋಟ ಚಳವಳಿ ಹತ್ತಿಕ್ಕಲು ಪೊಲೀಸರು ಭಾರೀ ಕಸರತ್ತನ್ನೇ ನಡೆಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಲು ಮುಂದಾದವರನ್ನು ಹುಡುಕಿ ಹುಡುಕಿ ವಶಕ್ಕೆ ಪಡೆದರು. ಈ ಮಧ್ಯೆಯೂ ನೌಕರರ ಕುಟುಂಬ ಸದಸ್ಯರು, ಸಣ್ಣ ಮಕ್ಕಳು ಕೈನಲ್ಲಿ ತಟ್ಟೆ, ಲೋಟ ಹಿಡಿದು ಬಡಿಯುವ ಮೂಲಕ ಸರ್ಕಾರದ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಮಹಿಳೆಯೊಬ್ಬರು ನಮಗೆ ಹೋರಾಟ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಪೊಲೀಸರ ಕಾಲಿಗೆ ಬಿದ್ದ ದೃಶ್ಯವೂ ಕಂಡು ಬಂತು. ಪೋಷಕರನ್ನು ವಶಕ್ಕೆ ಪಡೆಯುತ್ತಿರುವುದನ್ನು ನೋಡಿ, ಮಕ್ಕಳು ಕಣ್ಣೀರು ಹಾಕಿದರು. ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು, ಬೆಂಗಳೂರು ಡಿಸಿ ಕಚೇರಿಯ ಸುತ್ತ ಸರ್ಪಗಾವಲು ಹಾಕಿದರು.
ನಮ್ಮ ಶಾಂತಿಯುತ ಪ್ರತಿಭಟನೆ ಗೆಲ್ಲುತ್ತೋ, ಸರ್ಕಾರದ ಹಠ ಗೆಲ್ಲುತ್ತೋ ನೋಡೋಣಾ :
ನಮ್ಮ ಶಾಂತಿಯುತ ಪ್ರತಿಭಟನೆ ಗೆಲ್ಲುತ್ತೋ , ಇಲ್ಲಾ ಸರ್ಕಾರ ಹಠ ಗೆಲ್ಲುತ್ತೋ ನೋಡೋಣಾ ಎಂದು ಪ್ರತಿಭಟನೆಯಲ್ಲಿ ಭಾಗಿಯಾದವರು ಸವಾಲು ಹಾಕಿದರು. ಸರ್ಕಾರ ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ, ಆರನೇ ವೇತನ ಆಯೋಗ ಜಾರಿಯಾಗಲೇಬೇಕು. 30-40 ವರ್ಷಗಳ ಕಾಲ ಕಷ್ಟಪಡುವ ಬದಲು ಒಂದೇ ದಿನ ಸಾಯೋಣ. ನೌಕರರು ಯಾವುದಕ್ಕೂ ಎದೆಗುಂದದೆ ಶಾಂತಿಯುತ ಹೋರಾಟ ಮಾಡೋಣಾ ಎಂದರು.
ಸರ್ಕಾರ ನಮ್ಮ ಕುಟುಂಬದವರನ್ನು ಬಂಧಿಸಬಾರದಿತ್ತು :
ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಕೊರೊನಾ ಕಾರಣಕ್ಕೆ ಶಾಂತಿಯುತವಾಗಿ, ಮಾರ್ಗಸೂಚಿ ಪಾಲಿಸಿ ಡಿಸಿ ಕಚೇರಿ ಮುಂದೆ ಮುಷ್ಕರ ನಡೆಸಲು ಹೋದರೆ, ಅಲ್ಲಿ ನಮ್ಮ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಳೆಯ ದಿನ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ. ಹಸಿದ ಹೊಟ್ಟೆಗೆ ಊಟ ಕೊಡಿ ಅಂದರೆ, ಸರ್ಕಾರ ಹಠಮಾರಿತನ ಮುಂದುವರೆಸಿದೆ. ಮಾರ್ಚ್ ತಿಂಗಳ ಕೆಲಸ ನಿರ್ವಹಿಸಿದರೂ ಕೂಡ ವೇತನ ತಡೆಹಿಡಿದು ದೌರ್ಜನ್ಯ ಮಾಡುವುದು ಸರಿಯಲ್ಲ. ಈಗ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಿ, ಇಲ್ಲದಿದ್ದರೆ ನಾಳೆಯ ಸ್ವರೂಪ ಬೇರೆ ರೀತಿಯಲ್ಲೇ ಇರುತ್ತದೆ ಎಂದು ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಎಚ್ಚರಿಕೆ ನೀಡಿದರು.