ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ನಿವಾಸದ ಪಕ್ಕದಲ್ಲಿದ್ದ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಸಂಪಿಗೆಹಳ್ಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೇ ಕೊಲಂಬಿಯಾ ಮೂಲದ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.
ವಿಲಿಯನ್ ಪಡಿಲ್ಲಾ, ಲೇಡಿ ಸೆಫ್ಟನಿಯಾ ಮುನೋಜ್ ಮೋನ್ ಸಾಲ್ವೆ, ಕ್ರಿಶ್ಚಿಯನ್ ಯೀನೀಸ್ ನವರೋ ಬಂಧಿತರು. ಸದ್ಯ ಈ ಗ್ಯಾಂಗ್ನ ಮಾಸ್ಟರ್ ಮೈಂಡ್ ಆಗಿರುವ ಗುಸ್ತಾವೋಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಮೂಲತಃ ಕೊಲಂಬಿಯಾ ದೇಶದವರಾಗಿದ್ದು, ಟೂರಿಸ್ಟ್ ವೀಸಾದಡಿಯಲ್ಲಿ ಕೊಲಂಬಿಯಾ ದೇಶದಿಂದ ನೇಪಾಳ ಮಾರ್ಗವಾಗಿ ನವದೆಹಲಿಗೆ ಬಂದಿದ್ದರು. ಅದಾಗಲೇ ಕೃತ್ಯವೆಸಗಲು ರೆಡಿಯಾಗಿದ್ದ ಆರೋಪಿಗಳ ಮಾಸ್ಟರ್ ಮೈಂಡ್ ಗುಸ್ತಾವನಿಗೆ ಕರೆ ಮಾಡಿ ಬೆಂಗಳೂರು ನಗರವನ್ನ ಟಾರ್ಗೆಟ್ ಮಾಡಿ ಸರ್ವೀಸ್ ಅಪಾರ್ಟ್ಮೆಂಟ್ಗಳಲ್ಲಿ ವಾಸವಿರಲು ಪ್ಲಾನ್ ಮಾಡ್ತಾರೆ. ಬಳಿಕ ಆರೋಪಿಗಳು ಕೊತ್ತನೂರು ಹಾಗೂ ಬೆಂಗಳೂರಿನ ವಿವಿಧ ಪ್ರತಿಷ್ಠಿತ ಜಾಗಗಳಲ್ಲಿ ತಮ್ಮ ಬಳಿ ಇದ್ದ ಸೈಕಲ್ ಮೂಲಕ ರೌಂಡ್ಸ್ ಹಾಕಿದ್ದಾರೆ. ಯಾರೂ ಇಲ್ಲದ ಬೀಗ ಹಾಕಿರುವ ಮನೆ ಹಾಗೂ ಮನೆ ಮುಂದೆ ಹೆಚ್ಚು ನ್ಯೂಸ್ ಪೇಪರ್ ಬಿದ್ದಿರುವ ಮನೆಗಳನ್ನ ಗುರುತಿಸಿಕೊಂಡು ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಂಡು ಸಂಜೆ 7 ಗಂಟೆಯ ನಂತರ ಫೀಲ್ಡಿಗಿಳಿದು ಕೃತ್ಯ ಎಸಗುತ್ತಿದ್ದರು.
ಕೃತ್ಯಕ್ಕೆ ಹೈಫೈ ಮಷಿನ್ ಬಳಕೆ..
ಅಂದಹಾಗೆ ಈ ಐನಾತಿಗಳು ಕೃತ್ಯವೆಸಗಲು ಸಖತ್ತಾಗೆ ಪ್ಲಾನ್ ಮಾಡಿಟ್ಟುಕೊಳ್ತಿದ್ರು. ಬೆರಳ ಮುದ್ರೆಗಳು ಹಾಗೂ ತಮ್ಮ ಕುರುಹುಗಳು ಕಾಣದಂತೆ ಮುಖಕ್ಕೆ ಹಾಗೂ ದೇಹಪೂರ್ತಿ ಮುಚ್ಚಿಕೊಳ್ಳುವಂತೆ ಗೌನ್ ಧರಿಸಿಕೊಂಡು, ಗ್ಲೌಸ್, ಕ್ಯಾಪ್ ಹಾಗೂ ಮಾಸ್ಕ್ಗಳನ್ನ ಧರಿಸಿಕೊಂಡು ಫೀಲ್ಡಿಗಿಳಿಯುತ್ತಿದ್ದರು. ಇನ್ನು ಮನೆ ಬಾಗಿಲ ಬಳಿ ಸೆಫ್ಟನಿಯಾ ಎನ್ನುವ ಆರೋಪಿಯನ್ನ ಬಿಟ್ಟು ಮನೆಯ ಬೆಲ್ ಮಾಡಿಸಿ ಯಾರೂ ಇಲ್ಲದ್ದನ್ನ ಖಚಿತ ಮಾಡಿಕೊಂಡು ಇನ್ನಿತರೆ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಳ್ಳುವ ಭಯದಿಂದ ಯಾವುದೇ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಮೊಬೈಲ್ ಜಾಮರ್, ಪೆಪ್ಪರ್ ಸ್ಪ್ರೇ, ಚಾಕು, ಡ್ರಿಲ್ ಬಿಟ್ ಮಷಿನ್, ಲೇಸರ್ ಕಟ್ಟಿಂಗ್ ಮಷಿನ್, ಹಾರ್ಡ್ವೇರ್ ಟೂಲ್ಸ್, ಆಕ್ಸಲ್ ಬ್ಲೇಡ್, ಸ್ಪ್ಯಾನರ್, ರಾಡ್ಗಳು, ಕಟ್ಟಿಂಗ್ ಪ್ಲೇಯರ್, ಹೀಗೆ ಇನ್ನಿತರೆ ಯಂತ್ರಣಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದರು.
ಆರೋಪಿಗಳನ್ನ ಪತ್ತೆ ಮಾಡಿದ್ದೇ ಒಂದು ರೋಚಕ..
ಕಳೆದ ಅಕ್ಟೋಬರ್ 2019 ರಲ್ಲಿ ಆರೋಪಿಗಳು ಮಾನ್ಯತಾ ಟೆಕ್ ಪಾರ್ಕ್ನ ಹಿಂಭಾಗದ ಮನೆಯೊಂದರಲ್ಲಿ ಕಳವು ಮಾಡಲು ಬಂದಿದ್ದರು. ಬಾಗಿಲಿನ ಗ್ರಿಲ್ ಲಾಕನ್ನು ಮುರಿದು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದು ಸಂಪಿಗೆಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದ್ರೆ ಆರೋಪಿಗಳು ಎಸ್ಕೇಪ್ ಆಗಿ ತಾವು ತಂದಿದ್ದ ಕಾರನ್ನ ಅಲ್ಲಿಯೇ ಬಿಟ್ಟು ಹೋಗಿದ್ದರು. ಇನ್ನು ಸ್ಥಳದಲ್ಲಿ ಸಿಕ್ಕ ಕಾರು ಈ ವೇಳೆ ಅಕ್ಕಪಕ್ಕದ ಸಿಸಿಟಿವಿಗಳನ್ನು ಪರಿಶೀಲಿಸಿದಾಗ 15 ಅಡಿ ಎತ್ತರದಿಂದ ಹಾರಿದ್ದ ಆರೋಪಿಗಳನ್ನ ಗಮನಿಸಿದಾಗ ಅಷ್ಟು ಎತ್ತರದಿಂದ ಯಾರೂ ಹಾರಲು ಸಾಧ್ಯವಿಲ್ಲ. ಹೀಗಾಗಿ ಆರೋಪಿಗಳು ಪಾರ್ಕೋರ್ ತರಬೇತಿ ಪಡೆದು ಹಾರಿದ್ದಾರೆ ಅನ್ನೋ ಇಂಟ್ರಸ್ಟಿಂಗ್ ಮಾಹಿತಿ ತಿಳಿದು ಬಂದಿತ್ತು.
2018 ರಲ್ಲಿ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ತರಹದ ಸಾಧನಗಳನ್ನ ಬಳಸಿ ಕಳವು ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಎಂಓಬಿ, ಆಸಾಮಿಗಳ ಫೋಟೋಗಳನ್ನ ತರಿಸಿಕೊಂಡು ತನಿಖೆ ನಡೆಸಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿಗಳ ಫೋಟೋಗಳ ಸಾಮ್ಯತೆ ಮಾಡಿ ನೋಡಿದಾಗ ಇದೇ ಗ್ಯಾಂಗ್ ಅನ್ನೋದು ತಿಳಿದುಬಂದಿತ್ತು. ಹೀಗಾಗಿ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ಸಿದ್ಧ ಮಾಡಿದ್ದರು. ತನಿಖೆ ನಡೆಸಲು ಮುಂದಾದ ಪೊಲೀಸರು ಇದೊಂದು ಖತರ್ನಾಕ್ ಗ್ಯಾಂಗ್ ಎಂದು ತಿಳಿದು ವಿಶೇಷ ತಂಡವನ್ನೇ ರಚನೆ ಮಾಡಿದ್ದರು.
ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರ ನೇತೃತ್ವದಲ್ಲಿ 10 ತಂಡಗಳು ಸತತ ಎರಡು ತಿಂಗಳುಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸಿಸಿಟಿವಿ ಆಧರಿಸಿ ಪ್ರತಿಯೊಂದು ಏರಿಯಾಗಳನ್ನ ಸುತ್ತಿದ್ದ ಅಧಿಕಾರಿಗಳಿಗೆ ಥಣಿಸಂದ್ರ ಪೆಟ್ರೋಲ್ ಬ್ಯಾಂಕ್ ಬಳಿ ಮೋಟಾರ್ ಸೈಕಲ್ ಒಂದು ಅನುಮಾನಾಸ್ಪದವಾಗಿ ಓಡಾಡೋದನ್ನ ಗಮನಿಸಿದ್ದರು. ಇದನ್ನೇ ಲೀಡ್ ಆಗಿ ತೆಗೆದುಕೊಂಡು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ರು. ಈ ವೇಳೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರನ್ನ ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿದ್ದು ಇದೇ ಗ್ಯಾಂಗ್ ಎಂದು ತಿಳಿದು ಬಂದಿತ್ತು.
ಸ್ಪ್ಯಾನಿಷ್ ಭಾಷೆ ಮೂಲಕ ನಡೆದಿದ್ದ ವಿಚಾರಣೆ..
ಆರೋಪಿಗಳು ಕೊಲಂಬಿಯಾ ದೇಶದ ಪ್ರಜೆಗಳಾಗಿದ್ದು, ಸ್ಪ್ಯಾನಿಷ್ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆನೂ ಬರ್ತಿರಲಿಲ್ಲ. ಇಂಗ್ಲಿಷ್ ಕೂಡಾ. ಹೀಗಾಗಿ ವಿಚಾರಣೆ ನಡೆಸೋಕೆ ಪೊಲೀಸರಿಗೂ ಸಮಸ್ಯೆಯಾಗಿತ್ತು. ಅದಕ್ಕಾಗಿ ಸ್ಪ್ಯಾನಿಷ್ ಟ್ರಾನ್ಸ್ಲೇಟರನ್ನು ಕರೆಸಿಕೊಂಡು ಹಾಗೂ ಸಿಬ್ಬಂದಿಗಳು ಗೂಗಲ್ ಟ್ರಾನ್ಸ್ಲೇಟ್ ಆ್ಯಪ್ ಮುಖಾಂತರ ವಿಚಾರಣೆ ಮಾಡಿದ್ದಾರೆ. ಈವರೆಗೆ 2.58 ಕೋ.ರೂ ಬೆಲೆಬಾಳುವ 6 ಕೆಜಿ 143 ಗ್ರಾಂ ಚಿನ್ನದ ಒಡವೆಗಳನ್ನ ವಶಪಡಿಸಿಕೊಂಡಿದ್ದಾರೆ. ಅದರ ಜೊತೆಗೆ 4 ಲಕ್ಷ ಬೆಲೆಬಾಳುವ 9 ಪಿಸ್ತೂಲ್ 23 ಸಜೀವ ಗುಂಡುಗಳು, 60 ಸಾವಿರ ಬೆಲೆಬಾಳುವ ಎರಡು ಮೋಟಾರು ಬೈಕ್ಗಳು, 3 ಪಾಸ್ಪೋರ್ಟ್ಗಳು,1 ಫೇಕ್ ಪಾಸ್ಪೋರ್ಟ್, 1 ನಕಲಿ ಡ್ರೈವಿಂಗ್ ಲೈಸೆನ್ಸ್ ವಶಪಡಿಸಿಕೊಂಡಿದ್ದಾರೆ.
ಚಿನ್ನ ಕರಗಿಸಿ ವಿದೇಶಕ್ಕೆ ಎಸ್ಕೇಪ್ ಆಗಲು ಮುಂದಾಗಿದ್ದ ಆಸಾಮಿಗಳು.!
ಆರೋಪಿಗಳು ಹೈಫೈ ಮನೆಗಳನ್ನ ಟಾರ್ಗೆಟ್ ಮಾಡಿ ಚಿನ್ನಗಳನ್ನ ಕದ್ದು ಒಡವೆಗಳನ್ನು ಕರಗಿಸಿ ನೇಪಾಳ ಮಾರ್ಗವಾಗಿ ಹೊರದೇಶಕ್ಕೆ ಹೋಗಬೇಕೆಂದು ಯೋಜನೆ ರೂಪಿಸಿಕೊಂಡು ನಕಲಿ ಪಾಸ್ಪೋರ್ಟ್ ಹಾಗೂ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ನ್ನು ಸಹ ಈಗಾಗಲೇ ಮಾಡಿಸಿಕೊಂಡು ಒಂದು ವಾರದಲ್ಲಿ ವಿದೇಶಕ್ಕೆ ಪಲಾಯನ ಮಾಡಲು ಸಂಚು ರೂಪಿಸಿದ್ದರು. ಇದರ ಬಗ್ಗೆ ತನಿಖೆ ನಡೆಸಿದಾಗ ವಿದೇಶಕ್ಕೆ ಸ್ವತ್ತಿನ ಸಮೇತ ಪಲಾಯನ ಮಾಡಲು ಮುಂದಾಗಿದ್ರು ಅನ್ನೋ ಅಂಶ ಬೆಳಕಿಗೆ ಬಂದಿದೆ.