ಬೆಂಗಳೂರು: ಸಿಸಿಟಿವಿ ಕ್ಯಾಮರಾ ಇಲ್ಲದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಖದೀಮರನ್ನು ತಲಘಟ್ಟಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಪಿ, ರಾಜು, ಡೇವಿಡ್ , ಅರ್ಜುನ್, ಶಿವಾನಂದ ಹಾಗೂ ಸೋಮಶೇಖರ್ ಸೇರಿದಂತೆ ಒಟ್ಟು 16 ಅರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿರ್ದಿಷ್ಟ ಏರಿಯಾಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಈ ಖದೀಮರು ಸಿಸಿಟಿವಿ ಕ್ಯಾಮರಾ ಅಳವಡಿಸದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಅದರಿಂದ ಬಂದ ಹಣವನ್ನು ಮೋಜಿಗೆ ಬಳಸುತ್ತಿದ್ದರಂತೆ.
ಬಂಧಿತರಿಂದ 59 ಲಕ್ಷ ಬೆಲೆ ಬಾಳುವ 1,400 ಗ್ರಾಂ ಚಿನ್ನದ ಆಭರಣ, 9.5 ಕೆಜಿ ಬೆಳ್ಳಿಯ ಆಭರಣ ಹಾಗೂ 8 ದ್ವಿಚಕ್ರ ವಾಹನ ಸೇರಿದಂತೆ ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 26 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.
ಎರಡು ತಿಂಗಳಿನಿಂದ ತಲಘಟ್ಟಪುರ ಸುತ್ತಮುತ್ತ ಸಾಕಷ್ಟು ಅಪರಾಧ ಕೃತ್ಯಗಳು ನಡೆಯುತ್ತಿದ್ದವು. ರಾಬರಿ, ಬೈಕ್ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳನ್ನು ಬೇಧಿಸಲು ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫೆಟ್ ತಿಳಿಸಿದರು.
ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ತಲಘಟ್ಟಪುರ ರೌಡಿಶೀಟರ್ಗಳಿಗೆ ಡಿಸಿಪಿ ರೋಹಿಣಿ ಬಿಸಿ ಮುಟ್ಟಿಸಿದ್ದು, ಠಾಣೆಯ ಸುತ್ತಮುತ್ತ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡರು. 100ಕ್ಕೂ ಅಧಿಕ ರೌಡಿಶೀಟರ್ಗಳಿಗೆ ಮುಂದೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಗೂಂಡಾ ಕಾಯ್ದೆ ಜಾರಿ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು.