ಬೆಂಗಳೂರು: ಪೊಲೀಸ್ ಕೆಲಸ ಎಂದರೆ ಸದಾ ಒತ್ತಡದ ಕೆಲಸ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ವೃತ್ತಿಯ ಒತ್ತಡ ನಡುವೆಯೂ ಬೆಳೆಸಿಕೊಂಡಿರುವ ಪ್ರವೃತಿಗೆ ಕೊಂಚ ಸಮಯ ನೀಡಿ ಹುದುಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರಗೆಳೆದಿದ್ದು, ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ವಿರಳ ಸಂಖ್ಯೆಯಲ್ಲಿ ಪೊಲೀಸರು ಸಾಹಿತ್ಯ, ಸಂಗೀತ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಕನ್ನಡ ಕಟ್ಟುವ ಹಾಗೂ ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿರುವುದು ಶಾಘ್ಲನೀಯ. ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾನ್ಸ್ಸ್ಟೇಬಲ್ವೋರ್ವರು ತೆರೆಮರೆಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಕನ್ನಡದ ಮೇಲಿರುವ ಅನನ್ಯ ಪ್ರೀತಿಯಿಂದಾಗಿ ಅವರು ಈಗ ಕವಿಯೂ ಆಗಿದ್ದಾರೆ. ಆಡುಗೋಡಿಯಲ್ಲಿರುವ ಶ್ವಾನದಳ ವಿಭಾಗದಲ್ಲಿ ಕಾನ್ಸ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಮೌಲಾಲಿ ಕೆ. ಆಲಗೂರ ಬೋರಗಿ ಅವರ ಕನ್ನಡ ಪ್ರೇಮ ಅನನ್ಯವಾಗಿದೆ. ಸಿಂಧಗಿ ಮೂಲದ ಇವರು ಕನ್ನಡ ಬಗೆಗಿನ ಗೌರವ ಅಪರಿಮಿತ. ಬಾಲ್ಯದಿಂದಲೇ ಕನ್ನಡದ ಬಗ್ಗೆ ಅಕ್ಷರಗಳ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದು, ನಂತರದಲ್ಲಿ ಕಾಲಕ್ರಮೇಣ ಕವನ ಸಂಕಲನ ಬರೆಯುವ ಮೂಲಕ ಪ್ರಬುದ್ಧತೆ ತೋರಿದ್ದರು.
ಸದಾ ಬಿಡುವಿಲ್ಲದ ಪೊಲೀಸ್ ಸೇವೆಯಲ್ಲಿಯೂ ಸಾಹಿತ್ಯ ರಚಿಸಿದ್ದಾರೆ. ಸದ್ಯ ಸಾರ್ವಜನಿಕರ ಅಭಯ ಹೆಸರಿನಲ್ಲಿ ತಾವೇ ಸಾಹಿತ್ಯ ರಚಿಸಿ ಅದಕ್ಕೆ ವಿಕ್ಟರಿ ಸಿನಿಮಾದ ಮನೆಗೆ ಹೋಗೋದಿಲ್ಲ ಹಾಡಿನ ಟ್ಯೂನ್ ಹಾಕಿಸಿ ಪೊಲೀಸರ ಬಗೆಗಿನ ಇರುವ ಅಪನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ಇವರ ಪ್ರಯತ್ನಕ್ಕೆ ಡಿಸಿಪಿಗಳಾದ ರವಿ ಡಿ.ಚನ್ನಣ್ಣನವರ್, ಅಣ್ಣಾಮಲೈ ಹಾಗೂ ಅನುಚೇತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು, ಸರಗಳ್ಳರಿದ್ದಾರೆ ಜೋಕೆ ಸಾಂಗ್‌ನಿಂದ ಫೇಮಸ್ ಆಗಿದ್ದ ಹಾಗೂ ಜಾಗೃತಿ ಮೂಡಿಸಲು ಸಾಹಿತ್ಯ ರಚಿಸಿ ತಾವೇ ಹಾಡುವ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗಿದ್ದ ಬೈಯ್ಯಪ್ಪನ ಹಳ್ಳಿ ಠಾಣೆಯ ಕಾನ್ಸ್ಸ್ಟೇಬಲ್ ಸುಬ್ರಮಣ್ಯ ಶಾನುಭೋಗ ಇದೀಗ ತೆಲುಗು ಖಾಸಗಿ ವಾಹಿನಿಯಲ್ಲಿ ಆರಂಭವಾಗುತ್ತಿರುವ ಸಂಗೀತ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಅಪರಾಧ ಜಾಗೃತಿ ಕುರಿತಂತೆ ಸಾಹಿತ್ಯ ರಚಿಸಿ, ತಾವೇ ಹಾಡು ಹೇಳಿ ಸಾಮಾಜಿಕ ಜಾಲತಾಣದ ಮೂಲಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಸಾರ್ವಜನಿಕ ವಲಯದಲ್ಲಿ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ 10 ಸಾವಿರ ರೂ.ಬಹುಮಾನ ನೀಡಿ ಗೌರವಿಸಿದ್ದರು. ಇತ್ತೀಚೆಗೆ ಮನೆಗೆ ಹೋಗೋದಿಲ್ಲ ಎಂಬ ಸಿನಿಮಾ ಹಾಡನ್ನು ತಮ್ಮದೇ ಪೊಲೀಸ್ ಶೈಲಿಯಲ್ಲಿ ಸಾಹಿತ್ಯ ರಚಿಸಿ ಹಾಡಿಗೆ ದನಿಯಾಗಿದ್ದರು. ವೃತ್ತಿ ಜೊತೆಜೊತೆಗೆ ಸಿಂಗಿಂಗ್ ಶೋ ಮೆಗಾ ಆಡಿಷನ್ನಲ್ಲಿ ಆಯ್ಕೆಯಾಗಿದ್ದಾರೆ. ಆಸಕ್ತಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಬೆಂಬಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ ಎಂಬಂತಿದ್ದಾರೆ.