ಬೆಂಗಳೂರು: ಕೊರೊನಾ ನಿರ್ವಹಣೆ ಸಂಬಂಧ ರಾಜ್ಯದ 17 ಜಿಲ್ಲೆಗಳ ಡಿಸಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ಪ್ರಾರಂಭವಾಗಿದೆ.
ಗೃಹ ಕಚೇರಿ ಕೃಷ್ಣಾದಿಂದ ಈ ವಿಡಿಯೋ ಸಂವಾದದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣ್, ರಾಜ್ಯ ಸರ್ಕಾರದ ಸಿಎಸ್ ಪಿ.ರವಿಕುಮಾರ್ ಪಾಲ್ಗೊಂಡಿದ್ದರೆ, ಜಿಲ್ಲೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಕೊಡಗು, ಬೆಂಗಳೂರು ನಗರ, ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ಜಿಲ್ಲೆಗಳ ಕೊರೊನಾ ಸ್ಥಿತಿಗತಿ, ನಿರ್ವಹಣೆ ಬಗ್ಗೆ ಪ್ರಧಾನಿ ಮಾಹಿತಿ ಪಡೆಯಲಿದ್ದಾರೆ.
ಪ್ರಮುಖವಾಗಿ ಕಂಟೈನ್ಮೆಂಟ್ ಕ್ರಮಗಳನ್ನು ಬಿಗಿಯಾಗಿ ತೆಗೆದುಕೊಳ್ಳುವುದು, ಹೆಚ್ಚಿನ ಟೆಸ್ಟ್ ಮಾಡುವುದು ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುವುದು ಮತ್ತು ಲಸಿಕೆ ಕಾರ್ಯಕ್ರಮ ತ್ವರಿತಗತಿಯಲ್ಲಿ ಮುಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಸೂಚನೆ ನೀಡುವ ಸಾಧ್ಯತೆಯಿದೆ.
ರಾಜ್ಯದ ಈ 17 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದು, ಸದ್ಯದ ಸ್ಥಿತಿಗತಿ ಈ ಸಂಬಂಧ ತೆಗೆದುಕೊಂಡಿರುವ ಕ್ರಮ, ಲಸಿಕಾ ಕಾರ್ಯಕ್ರಮದ ಪ್ರಗತಿ, ಆಕ್ಸಿಜನ್, ರೆಮ್ಡಿಸಿವಿರ್ ಔಷಧ ಲಭ್ಯತೆಯ ಬಗ್ಗೆ ಡಿಸಿಗಳ ಜೊತೆ ಪ್ರಧಾನಿ ವಿಚಾರ ವಿನಿಮಯ ಮಾಡಲಿದ್ದಾರೆ.