ಬೆಂಗಳೂರು/ಚಾಮರಾಜನಗರ : ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಕ ರಾಜ್ಯಕ್ಕೆ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಏಪ್ರಿಲ್ 8 ರಂದು ಒಂದು ದಿನದ ಭೇಟಿಯ ವೇಳೆ ಪಕ್ಷ ಹಾಗು ಪ್ರಚಾರ ಕಾರ್ಯದಲ್ಲಿ ಭಾಗಿಯಾಗದೇ ವಾಪಸಾಗುತ್ತಿರುವುದು ವಿಶೇಷವಾಗಿದೆ.
ಪ್ರಧಾನಿ ಕಾರ್ಯಕ್ರಮ ಹೀಗಿದೆ..: ಏಪ್ರಿಲ್ 8ರಂದು ಮೋದಿ ಚೆನ್ನೈನಿಂದ ಮೈಸೂರಿಗೆ ಆಗಮಿಸುವರು. ಮೈಸೂರು ವಿಮಾನ ನಿಲ್ದಾಣಕ್ಕೆ ರಾತ್ರಿ 8.45ಕ್ಕೆ ಆಗಮಿಸಲಿದ್ದು, ಖಾಸಗಿ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಏಪ್ರಿಲ್ 9ರಂದು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಾಮರಾಜನಗರಕ್ಕೆ ಪ್ರಯಾಣಿಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಜಿಲ್ಲೆಗೆ ಆಗಮಿಸಲಿದ್ದು, ಬಂಡೀಪುರ ಹುಲಿ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡುವರು. ಬೆಳಗ್ಗೆ 7.15 ರಿಂದ 9.30ರ ವರೆಗೂ ಅವರು ಸಫಾರಿ ನಡೆಸಲಿದ್ದಾರೆ. ಬೆಳಗ್ಗೆ 11ರಿಂದ 12 ಗಂಟೆಯವರೆಗೆ ಟೈಗರ್ ಪ್ರಾಜೆಕ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 50 ವರ್ಷಗಳ ಹುಲಿ ಯೋಜನೆ ಸ್ಮರಣಾರ್ಥ ನಡೆಯುವ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 12.50ಕ್ಕೆ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮೋದಿ ಭೇಟಿಯ ವೇಳೆ ಯಾವುದೇ ರೀತಿಯ ರಾಜಕೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ. ಹೆಚ್ಚಿನ ಸಮಯಾವಕಾಶವೂ ಇಲ್ಲದ ಕಾರಣ ರಾಜ್ಯ ರಾಜಕೀಯ, ಚುನಾವಣೆ ಕುರಿತು ರಾಜ್ಯ ನಾಯಕರ ಜೊತೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ತಿಳಿದುಬಂದಿದೆ.
15 ಕಿ.ಮೀ ವನ್ಯಜೀವಿ ಸಫಾರಿ: ಏಪ್ರಿಲ್ 9 ರಂದು ಪ್ರಧಾನಿ ಮೋದಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ಕೊಡಲಿದ್ದು, ಬೆಳಗ್ಗೆ ಅರಣ್ಯ ಇಲಾಖೆ ಜೀಪ್‌ನಲ್ಲಿ ಸುಮಾರು 15 ಕಿ.ಮೀ ವನ್ಯಜೀವಿ ಸಫಾರಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಬಂಡೀಪುರದ ಬೋಳಗುಡ್ಡ ಎಂಬ ಕಳ್ಳಬೇಟೆ ತಡೆ ಶಿಬಿರಕ್ಕೆ ಪ್ರಧಾನಿ ಭೇಟಿ ನೀಡಲಿದ್ದು, ವಿಸ್ತಾರವಾದ ಅರಣ್ಯ ಪ್ರದೇಶ, ಸ್ವಚ್ಛಂದವಾಗಿ ವಿಹರಿಸುವ
ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಪ್ರಧಾನಿಗೆ ವಿಶೇಷ ಟೀ ವ್ಯವಸ್ಥೆ: ಬಂಡೀಪುರ ಭೇಟಿ ವೇಳೆ ದನ್ನಟ್ಟಿ ಹಳ್ಳ ಎಂಬ ಕ್ಯಾಂಪ್‌ನಲ್ಲಿ ಅರಣ್ಯ ವೀಕ್ಷಕರು, ವಿಶೇಷವಾಗಿ ಸೋಲಿಗರು ತಯಾರಿಸುವ ಕಪ್ಪು ಚಹಾ ಸೇವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಲು ಹಾಕದಿರುವ ಅಂತರ್ಜಲ, ನಿಂಬೆ ಹುಲ್ಲು, ಬೆಲ್ಲ ಹಾಕಿ ಮಾಡುವ ಟೀಯನ್ನು ಮೋದಿ ಅವರಿಗೆ ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಬಂಡೀಪುರ, ಮಧುಮಲೈನಲ್ಲಿ ಪೊಲೀಸರು ಅಲರ್ಟ್ : ಕರ್ನಾಟಕದ ಬಂಡೀಪುರ ಹಾಗೂ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಮೋದಿ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಎಸ್ಪಿಜಿ (ಭದ್ರತಾ ಪಡೆ) ಸ್ಥಳಕ್ಕೆ ಆಗಮಿಸಿದೆ. ರಾಂಪುರ ಆನೆ ಶಿಬಿರದ ಮಾವುತರ ಜೊತೆ ಸಂವಾದ ನಡೆಸಿ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ರಕ್ಷಿತಾರಣ್ಯದಲ್ಲಿನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ಕೊಡಲಿದ್ದಾರೆ.
ಈ ವೇಳೆ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಸಾಕ್ಷ್ಯ ಚಿತ್ರ ''ದ ಎಲಿಫ್ಯಾಂಟ್ ವಿಸ್ಪರರ್ಸ್''ನ ನಿಜ ಪಾತ್ರಧಾರಿಗಳಾದ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಪ್ರಧಾನಿ ಸನ್ಮಾನಿಸಲಿದ್ದಾರೆ. ಬಂಡೀಪುರದಂತೆ ನೀಲಗಿರಿಯಲ್ಲೂ ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದು ಭದ್ರತೆ ಸಂಬಂಧ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಜಂಟಿ ಸಭೆ ನಡೆಸಿದ್ದಾರೆ. ಮಧುಮಲೈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಎಲ್ಲಾ ಲಾಡ್ಜ್, ರೆಸಾರ್ಟ್‌ಗಳನ್ನು ಬಂದ್ ಮಾಡಲಾಗಿದ್ದು, ಯಾವುದೇ ಭದ್ರತಾ ಲೋಪವಾಗದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಪ್ರಧಾನಿ ಭೇಟಿಗೆ ಬೊಮ್ಮ-ಬೆಳ್ಳಿ ಕಾತರ: ಪ್ರಧಾನಿಯೊಬ್ಬರು ಕಾಡಿಗೆ ಬಂದು ಕಾಡು ಕುರುಬರನ್ನು ಭೇಟಿ ಮಾಡುತ್ತಾರೆ ಎಂಬುದೇ ದೊಡ್ಡ ವಿಚಾರ. ಅವರ ಭೇಟಿಗೆ ಕಾಯುತ್ತಿದ್ದೇವೆ. ಸಮಯ ಸಿಕ್ಕರೆ ನಾವು ಸೇರಿದಂತೆ ನಮ್ಮ ಸಮುದಾಯದ ಸಮಸ್ಯೆಗಳನ್ನು ಹೇಳಿಕೊಳ್ಳುವ ಕಾತುರತೆ ಇದೆ ಎಂದು ಅವರು ತಿಳಿಸಿದ್ದಾರೆ.
ಬಂಡೀಪುರದಲ್ಲೂ ಸಂತಸ: ವಿದ್ಯುತ್ ಶಾಕ್ನಿಂದ ಒದ್ದಾಡುತ್ತಿದ್ದ ಆನೆಯನ್ನು ಬದುಕಿಸಿದ್ದ ಅರಣ್ಯ ಇಲಾಖೆ ಕ್ರಮವನ್ನು ಟ್ವೀಟ್ ಮೂಲಕ ಪ್ರಶಂಸಿಸಿದ್ದ ಪ್ರಧಾನಿ ಈಗ ಸ್ವತಃ ಬಂದು ಅಭಿನಂದನೆ ಸಲ್ಲಿಸುತ್ತಿರುವುದರಿಂದ ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಸಂತಸ ಮನೆ ಮಾಡಿದೆ. ಆನೆ ಉಳಿಸಲು ಶ್ರಮ ವಹಿಸಿದ್ದ ಸಿಬ್ಬಂದಿಗೆ ಮೋದಿ ಸ್ಮರಣಿಕೆ ನೀಡಿ ಗೌರವಿಸಲಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಂಡೀಪುರ ಭೇಟಿ: 4 ದಿನ ಸಫಾರಿ ಇರಲ್ಲ, ರೆಸಾರ್ಟ್, ಹೋಂಸ್ಟೇಗೆ ನಿರ್ಬಂಧ