ಬೆಂಗಳೂರು: ಬೆಂಗಳೂರು ಉಪನಗರ ರೈಲು ಬೆಂಗಳೂರಿಗರ ಬಹುನಿರೀಕ್ಷಿತ ಯೋಜನೆ. ಹಲವು ಡೆಡ್‌ಲೈನ್, ವಿಳಂಬಗಳ ಬಳಿಕ ಕೊನೆಗೂ ಯೋಜನೆಗೆ ಕಾಮಗಾರಿ ಆರಂಭವಾಗುವ ಲಕ್ಷಣ ಕಾಣುತ್ತಿದೆ. ಈ ಮೂಲಕ ಇಲ್ಲಿತನಕ ಬರೀ ಘೋಷಣೆಯಾಗಿಯೇ ಉಳಿದಿದ್ದ ಮಹತ್ವದ ಯೋಜನೆಯ ಕಾಮಗಾರಿಗೆ ಚಾಲನೆ ಸಿಗುತ್ತಿದೆ. ಆದರೆ, ಯೋಜನೆಯ ಬಹುತೇಕ ಕಾರಿಡಾರ್‌ಗಳ ಕಾಮಗಾರಿಗಳು ಇನ್ನೂ ಪೂರ್ವಸಿದ್ಧತಾ ಹಂತದಲ್ಲೇ ಇವೆ.
20:20:60 (ರಾಜ್ಯ:ಕೇಂದ್ರ:ಸಾಲ) ವೆಚ್ಚ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗೆ ಕರ್ನಾಟಕ ಸರ್ಕಾರ 5,087 ಕೋಟಿ ರೂ, ಭಾರತ ಸರ್ಕಾರ 3,242 ಕೋಟಿ ಹಾಗೂ ಸಾಲದ ಮೂಲಕ 7,438 ಕೋಟಿ ರೂ. ಭರಿಸಲಿದೆ. 148.17 ಕಿ.ಮೀ. ಉದ್ದದ ಉಪನಗರ ರೈಲ್ವೇ ಯೋಜನೆಯನ್ನು ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಜಂಟಿ ಸಹಭಾಗಿತ್ವ ಸಂಸ್ಥೆಯಾದ ಕೆ-ರೈಡ್ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ.
1. ಯೋಜನೆಯ ಸ್ಥಿತಿಗತಿ ಏನಿದೆ?: ಉಪನಗರ ರೈಲು ಯೋಜನೆಯಲ್ಲಿ ಒಟ್ಟು ನಾಲ್ಕು ಕಾರಿಡಾರ್ಗಳನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರು- ದೇವನಹಳ್ಳಿ (41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಂಟೋನ್ಮೆಂಟ್ (35.52 ಕಿ.ಮೀ.) ಮತ್ತು ಹೀಲಲಿಗೆ-ರಾಜಾನುಕುಂಟೆ (46.24 ಕಿ.ಮೀ) ನಾಲ್ಕು ಕಾರಿಡಾರ್ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆ ಭರ್ತಿಗೆ ಪ್ರಧಾನಿ ಮೋದಿ ಸೂಚನೆ
ಕಾರಿಡಾರ್-2 ಬೈಯಪ್ಪನಹಳ್ಳಿ ಚಿಕ್ಕಬಾಣವಾರ (25.01 ಕಿ.ಮೀ.) ಕಾಮಗಾರಿಯ ಪೂರ್ವ ಸಿದ್ಧತಾ ಕಾಮಗಾರಿಯ ಕೆಲಸಗಳು ಪೂರ್ಣಗೊಂಡಿದೆ. ಸಿವಿಲ್ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದ್ದು, ಎಲ್ ಅಂಡ್ ಟಿ ಸಂಸ್ಥೆ ಕನಿಷ್ಠ ದರ ನಿಗದಿಗೊಳಿಸಿದ ಬಿಡ್ಡರ್ ಆಗಿ ಹೊರ ಹೊಮ್ಮಿದೆ. ಆದರೆ ಇನ್ನೂ ಕಾರ್ಯಾದೇಶ ಹೊರಡಿಸುವುದು ಬಾಕಿ ಇದೆ. ಎಲ್ ಆ್ಯಂಡ್ ಟಿ ಸಂಸ್ಥೆ 849 ಕೋಟಿ ರೂ. ಟೆಂಡರ್ ದರ ನಿಗದಿ ಮಾಡಿದೆ. ಈ ಒಂದು ಕಾರಿಡಾರ್ ಕಾಮಗಾರಿ ಸ್ವಲ್ಪ ಹೆಚ್ಚು ಪ್ರಗತಿ ಕಂಡಿದ್ದರೆ, ಉಳಿದ ಕಾರಿಡಾರ್ ಕಾಮಗಾರಿ ಪ್ರಗತಿ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಇದೇ ಕಾರಿಡಾರ್ ಕಾಮಗಾರಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
2. ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣ: ಆದರೆ, ಉಳಿದ ಮೂರು ಕಾರಿಡಾರ್‌ಗಳ ಕಾಮಗಾರಿಗಳ ಪೂರ್ವಸಿದ್ಧತಾ ಕೆಲಸಗಳೇ ಇನ್ನೂ ಪ್ರಗತಿಯಲ್ಲಿದೆ. ಹಂತ ಹಂತವಾಗಿ ಟೆಂಡರ್ಗಳನ್ನು ಕರೆಯಲಾಗುತ್ತಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಉಳಿದ ಮೂರು ಕಾರಿಡಾರ್‌ಗಳ ಕಾಮಗಾರಿಗಳು ಬಿಡ್ ಆಹ್ವಾನ ಹಂತದಲ್ಲೇ ಇದ್ದು, ಟೆಂಡರ್ ಕರೆಯಲು ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3. ಭೂ ಸ್ವಾಧೀನ ಕಾರ್ಯದಲ್ಲಿ ವಿಳಂಬ: ಯೋಜನೆಗಾಗಿ ಬೇಕಾಗಿರುವ ಸುಮಾರು 102 ಎಕರೆ ಭೂ ಸ್ವಾಧೀನ ಕಾರ್ಯವೇ ವಿಳಂಬವಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಸುಮಾರು 85% ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ರಾಜ್ಯ ಸರ್ಕಾರದಿಂದ ಸುಮಾರು 5% ಭೂಮಿಯನ್ನು ಸ್ವಾಧೀನ ಪಡಿಸಬೇಕಾಗಿದ್ದು, ಉಳಿದಂತೆ ಸುಮಾರು 10% ಭೂಮಿಯನ್ನು ಖಾಸಗಿಯವರಿಂದ ಸ್ವಾಧೀನ ಪಡಿಸಬೇಕಾಗಿದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. 101.7 ಎಕರೆ ಖಾಸಗಿ ಭೂಮಿಯ ಅವಶ್ಯಕತೆ ಇದೆ. ಇದರ ಸ್ವಾಧೀನಕ್ಕಾಗಿ 1,419 ಕೋಟಿ ರೂ. ವೆಚ್ಚವಾಗಲಿದೆ. 2026ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.