ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು 5 ದಿನಗಳ ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಚುನಾವಣಾ ಪ್ರಚಾರದ ಕಾವು ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಒಂದೆಡೆ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಅಧಿಕಾರದ ಗದ್ದುಗೆಗೇರಿಸಲೇ ಬೇಕು ಎಂದು ಅಭ್ಯರ್ಥಿಗಳ ಪರ ಗಾಂಧಿ ಪರಿವಾರವೇ ಅಖಾಡಕ್ಕೆ ಧುಮುಕಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕೇಂದ್ರ ನಾಯಕರ ದಂಡೇ ಕರ್ನಾಟಕ ಚುನಾವಣಾ ಕುರುಕ್ಷೇತ್ರಕ್ಕಿಳಿದು ಮಿಂಚಿನ ಮತಬೇಟೆ ನಡೆಸುತ್ತಿದ್ದಾರೆ.
ಇಂದಿನಿಂದ 3 ದಿನಗಳ ಕಾಲ ಪ್ರಧಾನಿ ಮೋದಿ ರಾಜ್ಯದಲ್ಲಿಯೇ ಮೊಕ್ಕಾಂ ಹೂಡಲಿದ್ದು ಹಲವು ಜಿಲ್ಲೆಗಳಲ್ಲಿ ರೋಡ್ ಶೋ, ಸಮಾವೇಶದ ಮೂಲಕ ಮತ ಯಾಚನೆ ನಡೆಸಲಿದ್ದಾರೆ. ಇಂದು (ಶುಕ್ರವಾರ) ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಅವರು, ಮಧ್ಯಾಹ್ನ 2 ಗಂಟೆಗೆ ಬಳ್ಳಾರಿ ಹಾಗೂ 4:30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬಳ್ಳಾರಿ ಸಮಾವೇಶಕ್ಕೆ ಮಳೆ ಆತಂಕ: ಬಳ್ಳಾರಿಯ ಕಪಗಲ್ಲು ರಸ್ತೆಯಲ್ಲಿ ಮೋದಿ ಸಾರ್ವಜನಿಕ ಸಮಾವೇಶ ನಡೆಯಲಿದ್ದು ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಆದರೆ ನಿನ್ನೆ ರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಕಾರ್ಯಕ್ರಮದ ಸ್ಥಳ ಕೆಸರುಮಯವಾಗಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಕಾರ್ಯಕ್ರಮಕ್ಕೆ ಮಳೆ ಆತಂಕ ಎದುರಾಗಿದೆ. ಮಳೆಯಿಂದ ಒದ್ದೆಯಾಗಿರುವ ವೇದಿಕೆಯನ್ನು ಸಿಬ್ಬಂದಿ ಸರಿಪಡಿಸುತ್ತಿದ್ದಾರೆ. ಕಾರ್ಯಕರ್ತರಿಗಾಗಿ ಸುಮಾರು 80 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಸುಮಾರು 1.5 ರಿಂದ 2 ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.
ಶನಿವಾರದ ಕಾರ್ಯಕ್ರಮ: ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಬಾದಾಮಿಗೆ ತೆರಳಲಿರುವ ಅವರು ಸಂಜೆ 4 ಗಂಟೆಗೆ ಸಮಾವೇಶದಲ್ಲಿ ಭಾಗಿಯಾಗುವರು. ಆ ನಂತರ 7 ಗಂಟೆಗೆ ಹಾವೇರಿಯಲ್ಲಿ ಸಾರ್ವಜನಿಕ ಸಭೆ ಇದೆ. ಇದಾದ ನಂತರ ಹುಬ್ಬಳಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಭಾನುವಾರದ ಕಾರ್ಯಕ್ರಮ: ಮೋದಿ ರಾಜ್ಯ ಪ್ರವಾಸದ 3ನೇ ದಿನ ಹಾಗು ಕೊನೆಯ ದಿನವಾದ ಭಾನುವಾರ ಬೆಳಗ್ಗೆ 10ರಿಂದ ಮದ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಶಿವಮೊಗ್ಗ ಹಾಗು 7 ಗಂಟೆಗೆ ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುವರು. ಈ ಸಭೆ ಮುಕ್ತಾಯಗೊಂಡ ನಂತರ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಮೈಸೂರಿನಿಂದ ದೆಹಲಿಗೆ ಹಿಂತಿರುಗಲಿದ್ದಾರೆ.
ಬೆಂಗಳೂರಿನಲ್ಲಿಂದು ರಸ್ತೆ ಸಂಚಾರ ಬದಲಾವಣೆ: ಇಂದು ಸಂಜೆ 5.30 ರಿಂದ 7ರ ವರೆಗೆ ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಎ.ಎಸ್.ಪಿ ಸೆಂಟರ್, ಅರಳಿ ಕಟ್ಟೆ, ಟ್ರಿನಿಟಿ ವೃತ್ತ, ಎಂ.ಜಿ ರಸ್ತೆ, ಡಿಕನ್ಸನ್ ರಸ್ತೆ, ಮಣಿಪಾಲ್ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರಸ್ತೆ, ಬಿ.ಆರ್.ವಿ ಜಂಕ್ಷನ್, ಇನ್ಫೆಂಟ್ರಿ ರಸ್ತೆ, ಸಿಟಿಓ ಜಂಕ್ಷನ್ ರಸ್ತೆ ಸಂಚಾರ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಈವರೆಗೆ 2,602 FIR ದಾಖಲು; ₹331 ಕೋಟಿ ಮೌಲ್ಯದ ವಸ್ತುಗಳು ಜಪ್ತಿ