ಬೆಂಗಳೂರು: ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಸಹಕಾರದೊಂದಿಗೆ ಶುರುವಾದ ಐಡಿ ಫ್ರೆಶ್ ಫುಡ್ ಈಗ ತೆಂಗಿನಕಾಯಿ ವ್ಯಾಪಾರಕ್ಕೂ ಕಾಲಿಟ್ಟಿದೆ. ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟಿಗೆ ಜನಪ್ರಿಯತೆ ಗಳಿಸಿರುವ ಈ ಪ್ಯಾಕೇಜ್ಡ್ ಆಹಾರೋದ್ಯಮ ಸಂಸ್ಥೆ ಇದೀಗ ತೆಂಗಿನಕಾಯಿ ಉತ್ಪನ್ನಗಳನ್ನು ವಿಭಿನ್ನವಾಗಿ ಮಾರುಕಟ್ಟೆಗೆ ಪರಿಚಯಿಸೋಕೆ ಮುಂದಾಗಿದೆ.
ಸ್ಮಾರ್ಟ್ ಓಪನ್ ಆ್ಯಂಡ್ ಸಿಪ್ ಟೆಂಡರ್ ಕಾಕನೆಟ್ ಮತ್ತು ಐಡಿ ಗ್ರೇಟೆಡ್ ಕೋಕನೆಟ್ ಎಂಬ ಎರಡು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದು ಇವೆರಡೂ ಉತ್ಪನ್ನಗಳು ತೆಂಗಿನಕಾಯಿಯ ಚಿಪ್ಪಿನ ಮೂಲಕವೇ ಪ್ಯಾಕೇಜ್ ಆಗಿ ನೈಸರ್ಗಿಕ ರೀತಿಯಲ್ಲೇ ಗ್ರಾಹಕರ ಕೈ ಸೇರಲಿದೆ.
ಏನಿದು Open and Sip ಉತ್ಪನ್ನ?
ತೆಂಗಿನಕಾಯಿಯ ಗಾತ್ರವನ್ನು 3-4 ಕೆ.ಜಿ.ಯಿಂದ 400-500 ಗ್ರಾಂಗೆ ಇಳಿಸಿದ್ದು ಕಾಯಿ ಮೈಮೇಲಿನ ತೊಗಟೆಯನ್ನು ತೆಗೆದು ಗ್ರಾಹಕರಿಗೆ ನೀಡಲಿದೆ. ಈ ಎಳನೀರನ್ನು ಗ್ರಾಹಕರು ಸ್ವಲ್ಪ ಒತ್ತಡ ಹಾಕುವ ಮೂಲಕ ಯಾವುದೇ ಸಾಧನಗಳ ಅವಶ್ಯಕತೆ ಇಲ್ಲದೆ ತೆರೆದು ಸೇವಿಸಬಹುದು. ಇದರ ಬೆಲೆ 60 ರೂಪಾಯಿ. ಇದರ ಮೇಲಿರುವ ಕಾರ್ಡ್ ಬೋರ್ಡ್‌ನಲ್ಲಿ ಒಳಗಿರುವ ನೀರು, ಪಲ್ಪ್ ಪ್ರಮಾಣದ ಸಂಪೂರ್ಣ ಮಾಹಿತಿ ಸಿಗಲಿದೆ.
ಏನಿದು Grated Coconut?
ಇದು ತೆಂಗಿನಕಾಯಿ ತುರಿ. ಈ ತುರಿ ಕೂಡಾ ತೆಂಗಿನಕಾಯಿ ತೊಗಟೆಯಲ್ಲೇ ಗ್ರಾಹಕರಿಗೆ ನೈಸರ್ಗಿಕವಾಗಿ ಸಿಗಲಿದ್ದು ಗ್ರಾಹಕರು ಅನಾಯಾಸವಾಗಿ ತೆರೆದು ಉತ್ಪನ್ನವನ್ನು ಬಳಸಬಹುದು.
ಈ ಬಗ್ಗೆ ಮಾತನಾಡಿದ ಐಡಿ ಫ್ರೆಶ್ ಸಂಸ್ಥೆಯ ಸಿಇಓ ಮತ್ತು ಸಹ ಸಂಸ್ಥಾಪಕ ಮುಸ್ತಾಫಾ ಪಿ.ಸಿ, ಸದ್ಯ ಈ ಉತ್ಪನ್ನಗಳನ್ನು ನಾವು ಬೆಂಗಳೂರು, ಮುಂಬೈ, ಕೇರಳ ಮತ್ತು ತಮಿಳುನಾಡಿನಲ್ಲಿ ಬಿಡುಗಡೆ ಮಾಡಿದ್ದೇವೆ.
ದೇಶದೆಲ್ಲೆಡೆ ಎಳನೀರು ಮಾರುಕಟ್ಟೆ ಮೌಲ್ಯ ಸುಮಾರು 4,000 ಕೋಟಿಯಷ್ಟಿದೆ. ಜೊತೆಗೆ ವಾರ್ಷಿಕ ಶೇ10 ರ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂದರು. ನಾವು ಬಿಡುಗಡೆ ಮಾಡಿರುವ ಈ ಉತ್ಪನ್ನಗಳು ಸದ್ಯ ರಿಟೇಲ್ ಸ್ಟೋರುಗಳು ಮತ್ತು ರಸ್ತೆ ಬದಿ ಅಂಗಡಿಗಳಲ್ಲಿ ಗ್ರಾಹಕರಿಗೆ ದೊರೆಯಲಿವೆ ಎಂದು ತಿಳಿಸಿದರು.
ಸಂಸ್ಥೆಯು ತೆಂಗಿನಕಾಯಿ ವ್ಯವಹಾರದಿಂದ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಗುರಿ ಹೊಂದಿದೆ.