ಬೆಂಗಳೂರು: ಗೌತಮ್ ಅದಾನಿ ಪ್ರಕರಣ ಸಂಪೂರ್ಣವಾಗಿ ಖಾಸಗಿ ಕಂಪನಿಗೆ ಸೇರಿದ ವಿಷಯವಾಗಿದ್ದು, ಅದಕ್ಕೂ ದೇಶಕ್ಕೂ ಸಂಬಂಧವಿಲ್ಲ, ಹಾಗಾಗಿ ದೇಶದ ಜನತೆ ಕಳವಳಗೊಳ್ಳಬೇಕಿಲ್ಲ, ಎಸ್ಬಿಐ ಮತ್ತು ಎಲ್ಐಸಿ ಹಣ ಭದ್ರವಾಗಿದೆ ಯಾರೂ ಆತಂಕಪಡಬೇಕಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದಾನಿ ಕಂಪನಿಯ ಷೇರು ಕುಸಿತ ಪ್ರಕರಣ ಚರ್ಚಿತವಾಗುತ್ತಿದೆ. ಷೇರು ಮಾರುಕಟ್ಟೆ ಸ್ಥಿತ್ಯಂತರ ಗಳ ಬಗ್ಗೆ ಷೇರ್ ಮಾರ್ಕೆಟ್ ರೆಗ್ಯುಲೇಟರಿ ನೋಡಿಕೊಳ್ಳಲಿದೆ. ಸೂಕ್ಷ್ಮವಾಗಿ ಪರಿಸ್ಥಿತಿ ಅವಲೋಕನ ಮಾಡಲಿದೆ. ಈಗಾಗಲೇ ಎಸ್ಬಿಐ ಮತ್ತು ಎಲ್ಐಸಿ ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ. ತಮ್ಮ ಹಣಕ್ಕೆ ತೊಂದರೆ ಇಲ್ಲ ಎಂದಿದ್ದಾರೆ. ರೆಗ್ಯುಲೇಟರಿ ಅಥಾರಿಟಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಸಂಸತ್ ನಲ್ಲಿ ಅದಾನಿ ಷೇರು ಕುಸಿತ ಪ್ರಕರಣ ಸದ್ದು ಮಾಡಿತು ಕುರಿತು ಮಾತನಾಡಿದ ಅವರು, ರಾಷ್ಟ್ರಪತಿ ಭಾಷಣದ ಮೇಲೆ ಚರ್ಚೆ ಆಗದಿರುವುದು ದುರದೃಷ್ಟಕರ ಎಂದರು.
ಈ ಬಾರಿ ಸ್ಪಷ್ಟ ಬಹುಮತ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೇಲೆ ಶೇ 40ರಷ್ಟು ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಯಾವುದೇ ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಮೋದಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಅಂತ ನಿರ್ಧಾರ ಮಾಡಿದ್ದಾರೆ. ಮೋದಿ ಅವರು ಶೇ 40ರಷ್ಟು ಕಮಿಷನ್ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ, ಖಂಡಿತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ನಡೆಯುವುದಕ್ಕೆ ನಾವು ಬಿಡಲ್ಲ ಎಂದ ಅವರು ಕಾಂಗ್ರೆಸ್ ಸುಳ್ಳು ಆರೋಪಗಳ ಬಗ್ಗೆ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಬಿಜೆಪಿಗೆ ಕರ್ನಾಟಕ ಜನ ಸ್ಪಷ್ಟ ಬಹುಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಪರಮೋಚ್ಚ ನಾಯಕ, ಹಿರಿಯ ನಾಯಕರಾಗಿದ್ದಾರೆ. ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿ ಸದಸ್ಯರಾಗಿದ್ದಾರೆ. ಬಿಜೆಪಿಯ ಎಲ್ಲ ನಿರ್ಧಾರಗಳಲ್ಲೂ ಅವರು ಪ್ರಮುಖರಾಗಿರುತ್ತಾರೆ. ಅವರನ್ನ ಪಕ್ಷ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ. ಮುಂದೆ ಸಹ ನಡೆಸಿಕೊಳ್ಳುತ್ತದೆ. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಿದ್ದೇವೆ.
ಅಭಿವೃದ್ಧಿಯ ಬಜೆಟ್: ಈ ಬಾರಿಯ ಬಜೆಟ್ ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಲು ಮೊದಲ ಹೆಜ್ಜೆಯಾಗಿದೆ. 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದೆ ದೇಶವಾಗಬೇಕು ಎನ್ನುವ ಸಂಕಲ್ಪ ತೊಟ್ಟು ಕೆಲಸ ಮಾಡಲಾಗುತ್ತಿದೆ. ಈ ಬಾರಿಯ ಕೇಂದ್ರ ಬಜೆಟ್ ಅಭಿವೃದ್ಧಿ ಹೊಂದಿದ ದೇಶವಾಗಿ ಬೆಳವಣಿಗೆ ಹೊಂದುವತ್ತ ಸಾಗುವುದಕ್ಕೆ ಮೊದಲ ಹೆಜ್ಜೆಯಾಗಿದೆ. ಕೇಂದ್ರ ಸರ್ಕಾರದ ಬಜೆಟ್ ದೇಶದ ಅಭಿವೃದ್ಧಿ ಪೂರಕವಾಗಿದೆ ದೇಶದ ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಗೆ ಪೂರಕವಾಗಿದೆ ಪ್ರತಿಯೊಬ್ಬ ಭಾರತೀಯ ತನ್ನ ಶ್ರಮದ ಮೂಲಕ ಸಮಾಜದ ಸುಧಾರಣೆ ದುಡಿಯಬೇಕು. ದೇಶದ ಆರ್ಥಿಕ ಅಭಿವೃದ್ಧಿಯನ್ನು ಮೂರನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.
ಕೇಂದ್ರ ಬಜೆಟ್ ದೇಶದ ಬೆಳವಣಿಗೆಗೆ ಪೂರಕವಾಗಿದೆ. ಯುವಕರಿಗೆ ಉದ್ಯೋಗ, ಸಮಾಜದ ಎಲ್ಲ ವಿಭಾಗಗಳ ಅಭಿವೃದ್ಧಿಗೆ ಅನುಕೂಲವಾಗಿದೆ. ಮೋದಿ ಉಚಿತ ವಸತಿ ನೀಡಿದ್ದಾರೆ, ಪ್ರತಿಮನೆಗೆ ವಿದ್ಯುತ್, ಶೌಚಾಲಯ, ಈಗ ಜಲಜೀವನ್ ಮಿಷನ್ ಅಡಿ ಮನೆ ಮನೆಗೂ ನೀರು ತಲುಪುತ್ತಿದೆ. ಇದಕ್ಕೆ ಬೆಂಬಲ ನೀಡಿದ ಕರ್ನಾಟಕ, ಬೆಂಗಳೂರಿಗೆ ಧನ್ಯವಾದಗಳು. ದೇಶದಲ್ಲಿ ಯಾರು ಸಹ ಮನೆ, ಊಟ ಇಲ್ಲದೆ ಇರಬಾರದು. ಪ್ರಧಾನಿ ಮೋದಿ ಮೂಲ ಅಗತ್ಯತೆಗಳ ಬಗ್ಗೆ ಗಮನ ನೀಡಿ ಯೋಜನೆ ರೂಪಿಸಿದ್ದಾರೆ. ಭಾರತ ಬೆಳೆಯುತ್ತಿರುವ ದೇಶವಾಗಿದೆ.
ರೈಲ್ವೆ ಯೋಜನೆ ಹಣ ಬಿಡುಗಡೆ, ಸಬ್ ಅರ್ಬನ್ ರೈಲು ವ್ಯವಸ್ಥೆ, ಭದ್ರಾ ಮೇಲ್ಕಂಡೆ ಯೋಜನೆಗೆ 5300 ಕೋಟಿ ನೀಡಲಾಗಿದೆ. ಮೈಸೂರಿಗೆ ಎಕ್ಸ್‌ಪ್ರೆಸ್ ಹೈವೆ ನೀಡಲಾಗಿದೆ ಇದರಿಂದ ಈ ಭಾಗದಲ್ಲಿ ಕೈಗಾರಿಕೆ,ಐಟಿ ಕ್ಷೇತ್ರದ ಬೆಳವಣಿಗೆ ಸಹಾಯ ಆಗಲಿದೆ. ಸದ್ಯ ಆರ್ಥಿಕ ಬೆಳವಣಿಗೆಯಲ್ಲಿ 10 ರಿಂದ 5 ನೇ ಸ್ಥಾನಕ್ಕೆ ಭಾರತ ಬಂದಿದ್ದು,ಕೆಲ ವರ್ಷದಲ್ಲಿ 3ನೇ ಸ್ಥಾನಕ್ಕೆ ಬರಲಿದೆ ಎಂದರು.
ಇದನ್ನೂ ಓದಿ: ಈ ಬಾರಿ ಕೇಂದ್ರದ ಬಜೆಟ್ನಲ್ಲಿ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್ ವಿಶ್ವನಾಥ್