ಬೆಂಗಳೂರು : ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಿರುವ ಸರ್ಕಾರದ ಅಧಿಸೂಚನೆ ರದ್ದು ಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಬಳ್ಳಾರಿಯ ಯೆರ್ರಿಸ್ವಾಮಿ ಎಂಬುವರು ಪಿಐಎಲ್ ಸಲ್ಲಿಸಿದ್ದು, ಅರ್ಜಿಯಲ್ಲಿ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿ ನಮೂದಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿದಾರರ ಕೋರಿಕೆ : ರಾಜಕೀಯ ಕಾರಣಗಳಿಗಾಗಿ ಬಳ್ಳಾರಿ ಜಿಲ್ಲೆ ವಿಭಜಿಸಲಾಗಿದೆ. ಜಿಲ್ಲೆ ವಿಭಜಿಸುವ ಸರ್ಕಾರದ ನಿಲುವು ವಿರೋಧಿಸಿ ತಿಂಗಳಿಂದ ಹೋರಾಟ ನಡೆದಿವೆ. ಬಳ್ಳಾರಿ ಜಿಲ್ಲೆ ವಿಭಜನೆಗೆ ಯಾವುದೇ ಬೇಡಿಕೆ ಇರದಿದ್ದರೂ, ಕೇವಲ ಸಚಿವ ಆನಂದ್ ಸಿಂಗ್ ಮನವಿ ಮೇರೆಗೆ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಸಿಎಂ ಆದೇಶಿಸಿದ್ದಾರೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
1997ರಲ್ಲಿಯೇ ಬಳ್ಳಾರಿ ವಿಭಜನೆ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ, ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಪ್ರಸ್ತಾವನೆ ಕೈಬಿಡಲಾಗಿತ್ತು. ಇದೀಗ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ವ್ಯಕ್ತಿಯೊಬ್ಬರ ಹಿತಾಸಕ್ತಿಗೆ ಸರ್ಕಾರ ಬಳ್ಳಾರಿ ಜಿಲ್ಲೆ ವಿಭಜಿಸಿದೆ. ಆದ್ದರಿಂದ ವಿಜಯನಗರ ಪ್ರತ್ಯೇಕ ಜಿಲ್ಲೆ ರಚಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಪಡಿಸಬೇಕೆಂದು ಮನವಿ ಮಾಡಿದ್ದಾರೆ.