ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಹಾಗೂ ಪ್ರಕರಣದಲ್ಲಿ ತನ್ನ ವಾದವನ್ನೂ ಆಲಿಸಬೇಕು ಎಂದು ಕೋರಿ ಯುವತಿ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 25ಕ್ಕೆ ಮುಂದೂಡಿದೆ.
ಸಿಬಿಐ ತನಿಖೆ ಕೋರಿ ವಕೀಲ ಉಮೇಶ್ ಸಲ್ಲಿಸಿರುವ ಪಿಐಎಲ್ ಅರ್ಜಿ ಹಾಗೂ ಈ ಅರ್ಜಿಯಲ್ಲಿ ತನ್ನ ವಾದವನ್ನೂ ಆಲಿಸುವಂತೆ ಕೋರಿ ಯುವತಿ ಸಲ್ಲಿಸಿರುವ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಬೇಕಿತ್ತು. ಆದರೆ ಸಮಯಾವಕಾಶದ ಕೊರತೆ ಎದುರಾಗಿದ್ದರಿಂದ ಅರ್ಜಿಗಳ ವಿಚಾರಣೆಯನ್ನು ಪೀಠ ಜೂನ್ 25ಕ್ಕೆ ಮುಂದೂಡಿತು.
ಹಿಂದಿನ ವಿಚಾರಣೆ ವೇಳೆ ಯುವತಿ ಪರ ವಾದ ಮಂಡಿಸಿದ್ದ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಪ್ರಕರಣದಲ್ಲಿ ಎಸ್ಐಟಿ ಸರಿಯಾದ ತನಿಖೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಕುರಿತು ಯುವತಿಯ ವಾದವನ್ನೂ ಆಲಿಸಬೇಕು. ಜತೆಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕೋರಿದ್ದರು.
ಹಾಗೆಯೇ ಯುವತಿ ಜಾರಕಿಹೊಳಿ ದಾಖಲಿಸಿರುವ ದೂರು ರದ್ದು ಕೋರಿ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸಲ್ಲಿಸಿರುವ ಅರ್ಜಿಯನ್ನೂ ಈ ಅರ್ಜಿಗಳ ಜೊತೆಗೆ ವಿಚಾರಣೆ ನಡೆಸಲು ಅಭ್ಯಂತರವಿಲ್ಲ ಎಂದಿದ್ದರು. ಜಾರಕಿಹೊಳಿ ಪರ ವಕೀಲರು ಖಾಸಗಿ ವ್ಯಕ್ತಿಗಳ ನಡುವಿನ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಬಾರದು ಹಾಗೂ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ಈ ಕುರಿತಂತೆ ಹೆಚ್ಚುವರಿ ವಾದ-ಪ್ರತಿವಾದ ಮಂಡಿಸಲು ಉಭಯ ಪಕ್ಷಗಳ ವಕೀಲರು ಸಿದ್ದರಿದ್ದರು. ಕಾಲಾವಕಾಶದ ಕೊರತೆಯಿಂದಾಗಿ ವಿಚಾರಣೆ ಮುಂದೂಡಲ್ಪಟ್ಟಿದೆ.
ಓದಿ: ಸಿಡಿ ಕೇಸ್ನಲ್ಲಿ ಯುವತಿ ಬಂಧಿಸದಂತೆ ಮನವಿ : ಕೋರಿಕೆ ಪುರಸ್ಕರಿಸದ ಹೈಕೋರ್ಟ್