ಬೆಂಗಳೂರು: ಕೊರೊನಾ ಭೀತಿಯಲ್ಲಿ ನ್ಯಾಯಾಲಯಗಳಿಗೆ ರಜೆ ಘೋಷಿಸಿರುವ ಪರಿಣಾಮ ಸಾಕಷ್ಟು ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವಕೀಲರಿಗೆ ತಲಾ 50 ಸಾವಿರ ರುಪಾಯಿ ನೆರವು ನೀಡುವಂತೆ ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಹೈಕೋರ್ಟ್ನ ಹಿರಿಯ ವಕೀಲ ಎಚ್.ಸಿ. ಶಿವರಾಮ ಅವರು ಈ ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ರಾಜ್ಯ ವಕೀಲರ ಪರಿಷತ್ನಿಂದ ಸನ್ನದು ಪಡೆದಿರುವ ವಕೀಲರು ಕಾಲಕಾಲಕ್ಕೆ ಕಲ್ಯಾಣ ನಿಧಿಗೆ ಹಣ ಪಾವತಿ ಮಾಡುತ್ತಿದ್ದಾರೆ. ಹೀಗೆ ಸಲ್ಲಿಕೆಯಾದ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇರಿಸಲಾಗಿದೆ. ಈ ಮೊತ್ತದಲ್ಲಿ ತಲಾ 50 ಸಾವಿರ ರೂಪಾಯಿ ಹಣವನ್ನು ಯಾರಿಗೆ ಅಗತ್ಯವಿದೆಯೊ ಅಂತಹ ವಕೀಲರಿಗೆ ಎಕ್ಸ್ಗ್ರೇಷಿಯಾ ಮೊತ್ತ ಎಂದು ಪರಿಗಣಿಸಿ ತಕ್ಷಣವೇ ಬಿಡುಗಡೆ ಮಾಡಲು ರಾಜ್ಯ ವಕೀಲರ ಪರಿಷತ್ಗೆ ನಿರ್ದೇಶಿಸಬೇಕು.
ಈಗ ನೀಡುವ 50 ಸಾವಿರ ಮೊತ್ತವನ್ನು ಕಲ್ಯಾಣ ನಿಧಿಯ ಬಿಡುಗಡೆ ಸಮಯದಲ್ಲಿ ಕಡಿತ ಮಾಡಿಕೊಳ್ಳಬಹುದು. ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯ್ದೆ-1961 ಕಲಂ 168ರ ಅಡಿಯಲ್ಲಿ ಈ ಹಣ ಬಿಡುಗಡೆ ಮಾಡಲು ಅವಕಾಶ ಇದ್ದು ಅದರಂತೆ ನೆರವು ನೀಡಲು ಪರಿಷತ್ತಿಗೆ ನಿರ್ದೇಶಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಪಶ್ಚಿಮ ಬಂಗಾಳ, ದೆಹಲಿ ಹಾಗೂ ತಮಿಳುನಾಡು ರಾಜ್ಯಗಳ ವಕೀಲರ ಪರಿಷತ್ ಕೈಗೊಂಡಿರುವ ಕ್ರಮಗಳನ್ನು ಗಮನಿಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಕರಣದಲ್ಲಿ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿ, ಭಾರತೀಯ ವಕೀಲರ ಪರಿಷತ್ ಮತ್ತು ರಾಜ್ಯ ವಕೀಲರ ಪರಿಷತ್ ಕಾರ್ಯದರ್ಶಿಗಳು, ಭಾರತೀಯ ವಕೀಲರ ಕಲ್ಯಾಣ ನಿಧಿಗಳ ಸಮಿತಿ ಹಾಗೂ ಕರ್ನಾಟಕ ವಕೀಲರ ಕಲ್ಯಾಣ ನಿಧಿ ಟ್ರಸ್ಟಿ ಸಮಿತಿಯ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.