ಬೆಂಗಳೂರು : ನಗರದ ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಮನವಿಯನ್ನು ಅರ್ಜಿದಾರರು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಕೋರಬಹುದು ಎಂದು ನಿರ್ದೇಶಿಸಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ವಿಧಿಸಿದ್ದ ನಿಷೇಧವನ್ನು ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷರೂ ಆಗಿರುವ ವಕೀಲ ಎಸ್. ಉಮೇಶ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರು ಈ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಸರ್ಕಾರ ಈ ಮನವಿಯನ್ನು ಪರಿಗಣಿಸಿ ಆರು ವಾರಗಳಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ಕೊರೊನಾ ಬಂದ ಬಳಿಕ ಘೋಷಣೆಯಾದ ಲಾಕ್‌ಡೌನ್ ಅವಧಿಯಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ಇದರಿಂದ ಸಹಜವಾಗಿಯೇ ಪಾರ್ಕ್ ಒಳಗಿದ್ದ ದೂಳು ಹೊಗೆ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಾರ್ಕ್ ಒಳಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿದ್ದ ಅರ್ಜಿದಾರರು, ಲಾಕ್ ಡೌನ್ ಬಳಿಕ ಉದ್ಯಾನದಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿ, ಹಸಿರಿನಿಂದ
ಕಂಗೊಳಿಸುತ್ತಿದೆ.
ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಸುವಂತೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ.ಮಂಜುಳಾ 2020ರ ಸೆ.2ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅದನ್ನು ಪರಿಗಣಿಸದೆ ಕಬ್ಬನ್ ಪಾಕ್ ಒಳಗೆ ವಾಹನ ಸಂಚಾರಕ್ಕೆ ಸರ್ಕಾರ ಮತ್ತೆ ಅನುಮತಿ ನೀಡಿದೆ. ಆದ್ದರಿಂದ, ಅಧಿಕಾರಿಯ ಶಿಫಾರಸ್ಸು ಅನುಷ್ಠಾನಗೊಳಿಸಿ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ಸ್ಥಗಿತಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.