ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಹಾಗೂ ಸೌಲಭ್ಯ ಕಲ್ಪಿಸುವಿಕೆ) ಕಾಯ್ದೆ ಹಾಗೂ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ನಗರದ ಡಿ.ಎಲ್ ನಾಗರಾಜ್ ಸೇರಿದಂತೆ ಐವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂಬಿ ನರಗುಂದ ಅವರು ವಾದಿಸಿ, ಕೇಂದ್ರ ಸರ್ಕಾರ ಜೂನ್ 5ರಂದು ಹೊರಡಿಸಿದ್ದ ರೈತ ಉತ್ಪನ್ನ ವಾಣಿಜ್ಯ ಮತ್ತು ವ್ಯಾಪಾರ (ಪ್ರಚಾರ ಹಾಗೂ ಸೌಲಭ್ಯ ಕಲ್ಪಿಸುವುದು) ಸುಗ್ರೀವಾಜ್ಞೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ. ಅದರಂತೆ ಸುಗ್ರೀವಾಜ್ಞೆ ಇದೀಗ ಕಾಯ್ದೆಯಾಗಿದೆ. ಆದರೆ, ಅರ್ಜಿದಾರರು ಸುಗ್ರೀವಾಜ್ಞೆ ಪ್ರಶ್ನಿಸುವುದರಿಂದ ಅರ್ಜಿ ವಿಚಾರಣೆ ಮಾನ್ಯತೆ ಕಳೆದುಕೊಳ್ಳಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ್, ಅರ್ಜಿಯನ್ನು ತಿದ್ದುಪಡಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಕೋರಿಕೆ ಪುರಸ್ಕರಿಸಿದ ಪೀಠ, ಅರ್ಜಿ ತಿದ್ದುಪಡಿ ಮಾಡಿ ಸಲ್ಲಿಸಲು ಅನುಮತಿ ನೀಡಿ ವಿಚಾರಣೆಯನ್ನು ಅಕ್ಟೋಬರ್ 2ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ:
ರೈತ ಉತ್ಪನ್ನ ವಾಣಿಜ್ಯ ಮತ್ತು ವ್ಯಾಪಾರ (ಪ್ರಚಾರ ಹಾಗೂ ಸೌಲಭ್ಯ ಕಲ್ಪಿಸುವಿಕೆ) ಸುಗ್ರೀವಾಜ್ಞೆ ಹಾಗೂ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ಎಪಿಎಂಸಿ ಕಾಯ್ದೆ ರೈತ ವಿರೋಧಿಯಾಗಿವೆ. ಈ ಕಾಯ್ದೆಗಳಿಂದ ದೇಶಾದ್ಯಂತ ಇರುವ ಸುಮಾರು 5000 ಕ್ಕೂ ಅಧಿಕ ಇರುವ ರೈತಸ್ನೇಹಿ ಎಪಿಎಂಸಿ ಮಾರುಕಟ್ಟೆಗಳು ನಾಶವಾಗಲಿವೆ. ಕಾಯ್ದೆಗಳು ಜಾರಿಯಾದಲ್ಲಿ ಕೃಷಿ ಕ್ಷೇತ್ರ ಸಂಪೂರ್ಣವಾಗಿ ಸಿರಿವಂತರ ಮತ್ತು ಉದ್ಯಮಿಗಳ ನಿಯಂತ್ರಣಕ್ಕೆ ಒಳಪಡಲಿದೆ.
ಹಾಗಾದಲ್ಲಿ ರೈತರಿಂದ ಖರೀದಿಸುವ ಕೃಷಿ ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಬೇಡಿಕೆ ಹೆಚ್ಚಿಸಿ ನಂತರ ಮಾರಾಟ ಮಾಡುವ ಸಾಧ್ಯತೆ ಇದೆ. ಇದು ರೈತರಿಗೂ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ಕಂಟಕ ಸೃಷ್ಟಿಸಲಿದೆ. ಬಲಾಢ್ಯ ಸಂಸ್ಥೆಗಳನ್ನು ಮಣಿಸುವುದು ಸರ್ಕಾರಕ್ಕೂ ಕಷ್ಟ ಆಗಲಿದೆ. ಕೋವಿಡ್ ಸಂದರ್ಭದಲ್ಲಿ ಯಾವುದೇ ಚರ್ಚೆ ನಡೆಸದೇ ಇಂತಹ ಕಾಯ್ದೆಗಳನ್ನು ಜಾರಿಗೊಳಿಸಿರುವುದು ನಿಯಮ ಬಾಹಿರ. ಹೀಗಾಗಿ ಕಾಯ್ದೆಗಳನ್ನು ಸಂವಿಧಾನಬಾಹಿರ ಎಂದು ಘೋಷಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.