ಬೆಂಗಳೂರು: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೇರಳದಿಂದ ಕರ್ನಾಟಕಕ್ಕೆ ರಸ್ತೆ ಮೂಲಕ ಪ್ರಯಾಣಿಸುವವರಿಗೆ ನಿರ್ಬಂಧಗಳನ್ನು ಹೇರಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕೇರಳದಿಂದ ಕರ್ನಾಟಕಕ್ಕೆ ಬರುವ ವಿಮಾನಗಳ ಪ್ರಯಾಣಿಕರಿಗೆ ಯಾವುದೇ ನಿರ್ಬಂಧಗಳಿಲ್ಲ. ಆದರೆ, ರಸ್ತೆ ಮೂಲಕ ಬರುವವರಿಗೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯೇ? ನಿಮ್ಮ ಬಳಿ ಹಣ ಇದ್ದರೆ ವಿಮಾನದ ಮೂಲಕ ಯಾವುದೇ ನಿರ್ಬಂಧಗಳಿಲ್ಲದೆ ಬರಬಹುದು. ಇಲ್ಲವಾದರೆ ಎಲ್ಲಾ ಬಗೆಯ ನಿರ್ಬಂಧಗಳನ್ನು ಎದುರಿಸಬೇಕೆ? ಇದೆಂತಹ ನ್ಯಾಯ ಎಂದು ಹೈಕೋರ್ಟ್ ಸರ್ಕಾರದ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿದೆ.
ಇದನ್ನೂ ಓದಿ: ಅಕ್ರಮ ಬಾಂಗ್ಲಾ ನಿವಾಸಿಗಳೆಂದು ಜೋಪಡಿ ತೆರವು: ಪರಿಹಾರ ವಿತರಣೆ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ
ಕಾಸರಗೋಡಿನ ವಕೀಲ ಬಿ. ಸುಬ್ಬಯ್ಯ ರೈ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಹೀಗೆ ಪ್ರಶ್ನಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಾ. 15ರಂದು ಹೊರಡಿಸಿರುವ ಪರಿಷ್ಕೃತ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಆದೇಶ ಸಮರ್ಪಕವಾಗಿಲ್ಲ. ವಿವೇಚನೆ ಇಲ್ಲದೆ ಹೊರಡಿಸಲಾಗಿದೆ, ಅದನ್ನು ಹಿಂಪಡೆಯಬೇಕು ಎಂದು ಸಲಹೆ ನೀಡಿದೆ.
ಪರಿಷ್ಕೃತ ಆದೇಶ ಹಿಂದಿನ ಆದೇಶಕ್ಕಿಂತ ಕೆಟ್ಟದಾಗಿದೆ. ಹೊಸ ಆದೇಶದಂತೆ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಚೆಕ್ ಪೋಸ್ಟ್ ಅಥವಾ ಗಡಿಗಳನ್ನು ಯಾವಾಗ ಬೇಕಾದರೂ ಮುಚ್ಚುವ ಏಕಪಕ್ಷೀಯ ಅಧಿಕಾರವನ್ನು ನೀಡುತ್ತದೆ. ಮೊದಲಿನ ಆದೇಶದಲ್ಲಿ ಯಾವ ಚೆಕ್ ಪೋಸ್ಟ್ ಮುಚ್ಚಬೇಕು, ಯಾವುದು ಮುಚ್ಚಬಾರದು ಎಂಬ ಸ್ಪಷ್ಟತೆ ಇತ್ತು. ಇದರಲ್ಲಿ ಅದೂ ಇಲ್ಲ ಎಂದು ಪೀಠ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದೆ.