ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರು ವಿಸ್ತರಣೆ ಕಾಮಗಾರಿಯಿಂದ ಆಮೆಗಳ ವಾಸಸ್ಥಳ ಹಾಗೂ ಸಂತಾನೋತ್ಪತ್ತಿಗೆ ತೊಂದರೆ ಆಗಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು ಚೆನ್ನೈನ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರವನ್ನು (ಎನ್ಸಿಎಸ್ಸಿಎಂ) ನೇಮಕ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಬಂದರು ವಿಸ್ತರಣೆ ರದ್ದು ಕೋರಿ ಹೊನ್ನಾವರ ತಾಲೂಕು ಹಸಿಮೀನು ವ್ಯಾಪಾರಸ್ಥರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಅರ್ಜಿದಾರರ ಪರ ವಕೀಲ ಮೂರ್ತಿ ಡಿ. ನಾಯಕ್ ವಾದ ಮಂಡಿಸಿ, ಬಂದರು ಪ್ರದೇಶ ಆಮೆ ವಲಯವಾಗಿದ್ದು, ಅಲ್ಲಿ ಆಮೆಗಳು ಗೂಡು ಕಟ್ಟುತ್ತವೆ. ಅಭಿವೃದ್ಧಿ ಕಾಮಗಾರಿಯಿಂದ ಅವುಗಳಿಗೆ ತೊಂದರೆಯಾಗಲಿದೆ ಎಂದು ವಿವರಿಸಿದರು.
ಓದಿ : ಪೊಲೀಸರ ನೋಟಿಸ್ ಪ್ರಶ್ನಿಸಿ ಟ್ವಿಟರ್ ಎಂಡಿ ಮನೀಶ್ ಅರ್ಜಿ : ಜುಲೈ 20ಕ್ಕೆ ತೀರ್ಪು ಮುಂದೂಡಿದ ಹೈಕೋರ್ಟ್
ವಾದ ಆಲಿಸಿದ ಪೀಠ, ಕೇಂದ್ರ ಪರಿಸರ ಇಲಾಖೆ 2012ರಲ್ಲಿಯೇ ಬಂದರು ಅಭಿವೃದ್ಧಿ ಯೋಜನೆಗೆ ಅನುಮತಿ ನೀಡಿದೆ. ಅದಕ್ಕೂ ಮುನ್ನ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು, ಆ ಸಂದರ್ಭದಲ್ಲಿ ಆಕ್ಷೇಪ ಎತ್ತದ ಅರ್ಜಿದಾರರು, 2019ರ ಜುಲೈನಲ್ಲಿ ಅನುಮತಿ ನವೀಕರಿಸಿದ ಬಳಿಕ ಪ್ರಶ್ನಿಸುತ್ತಿರುವುದೇಕೆ ಎಂದು ಕೇಳಿತು.
ಆದರೂ, ಆಮೆಗಳ ವಾಸಸ್ಥಾನಕ್ಕೆ ಧಕ್ಕೆಯಾಗಲಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಆ ಪ್ರದೇಶದಲ್ಲಿ ಏನಾದರೂ ಬದಲಾವಣೆಗಳು ಆಗಿವೆಯೇ ಎಂಬ ಬಗ್ಗೆ ವರದಿ ಸಲ್ಲಿಸಬೇಕು. ಹಾಗೆಯೇ, ಕಡಲು ಆಮೆಗಳ ಸಂತಾನಾಭಿವೃದ್ಧಿ ಪ್ರದೇಶವನ್ನು ಯೋಜನೆ ಒಳಗೊಂಡಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ಎನ್ಸಿಎಸ್ಸಿಎಂಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಬೇಕು. ಅದಕ್ಕೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ನಿರ್ದೇಶಿಸಿತು.
ಇದೇ ವೇಳೆ ಬಂದರು ಅಭಿವೃದ್ಧಿ ಕಾಮಗಾರಿ ಮುಂದುವರೆಸಿದಲ್ಲಿ ಅದು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ ವಿಚಾರಣೆ ಮುಂದೂಡಿತು.