ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ರೂಪಿಸಿರುವ 'ಆರೋಗ್ಯ ಸೇತು' ಮೊಬೈಲ್ ಆ್ಯಪ್ ಬಳಕೆ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿದೆ.
ಈ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ನಗರದ ಅನಿವರ್ ಎ. ಅರವಿಂದ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕೇಂದ್ರ ಗೃಹ ಸಚಿವಾಲಯ, ಕೇಂದ್ರ ರೈಲ್ವೆ ಸಚಿವಾಲಯ, ಕೇಂದ್ರ ವಿಮಾನಯಾನ ಸಚಿವಾಲಯ, ಭಾರತೀಯ ವಿಮಾನಯಾನ ಪ್ರಾಧಿಕಾರ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂ.12ಕ್ಕೆ ಮುಂದೂಡಿತು.
ಪಿಐಎಲ್ ಸಾರಾಂಶ: ಕೊರೊನಾ ಸೋಂಕು ನಿಯಂತ್ರಿಸಲು ಆರೋಗ್ಯ ಸೇತು ಮೊಬೈಲ್ ಆ್ಯಪ್ ರೂಪಿಸಲಾಗಿದ್ದು, ಇದನ್ನು ಎಲ್ಲರೂ ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. ಆದರೆ ಭಾರತದಲ್ಲಿ ಶೇ.35ರಷ್ಟು ವಯಸ್ಕ ಜನ ಮಾತ್ರ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಾರೆ. ಹೀಗಾಗಿ, ಆ್ಯಪ್ ಅನ್ನು ಎಲ್ಲರೂ ಬಳಸಲು ಸಾಧ್ಯವಿಲ್ಲ. ಮುಖ್ಯವಾಗಿ ಕೇಂದ್ರ ಸರ್ಕಾರದ ಈ ನಿರ್ಧಾರ ವ್ಯಕ್ತಿಯ ಖಾಸಗಿತನದ ಹಕ್ಕಿಗೆ ವಿರುದ್ಧವಾಗಿದೆ.
ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಐಚ್ಛಿಕಗೊಳಿಸಬೇಕೇ ವಿನಃ ಕಡ್ಡಾಯಗೊಳಿಸಬಾರದು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.