ಬೆಂಗಳೂರು: ಬೋರ್ಡ್ ಮೇಲೆ ಬರೆದಿರುವುದನ್ನು ನೋಟ್ ಬುಕ್ ನಲ್ಲಿ ಬರೆದುಕೊಂಡಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ಶಾಲಾ ಶಿಕ್ಷಕಿಯೊಬ್ಬಳು 3ನೇ ತರಗತಿ ವಿದ್ಯಾರ್ಥಿನ್ನು ಥಳಿಸಿರುವ ಘಟನೆ ನಗರದ ಚಂದ್ರಾ ಲೇಔಟ್ ನಲ್ಲಿರುವ ಸೆಂಟ್ ಫ್ಲವರ್ ಇಂಗ್ಲಿಷ್ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿ ತಂದೆ ನವೀನ್ ಕುಮಾರ್ ನೀಡಿದ ದೂರಿನನ್ವಯ ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಚಂದ್ರಾ ಲೇಔಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕನಿಷ್ಕ್ ಇದೇ ತಿಂಗಳು 5 ರಂದು ಕನ್ನಡ ನೋಟ್ಸ್ ಬರೆದಿಲ್ಲ ಎಂಬ ವಿಚಾರಕ್ಕಾಗಿ ಶಾಲಾ ಶಿಕ್ಷಕಿ ಚೈತ್ರ ಬೆತ್ತದಿಂದ ವಿದ್ಯಾರ್ಥಿ ಕಾಲು, ಕೈಗೆ ಹಾಗೂ ದೇಹದ ಇತರೆ ಭಾಗಗಳ ಮೇಲೆ ಹೊಡೆದಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಮಗನನ್ನು ವಾಣಿ ವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಕಾಲಿನ ಮೂಳೆಗೆ ಪೆಟ್ಟಾಗಿರುವುದಾಗಿ ತಿಳಿಸಿದ್ದಾರೆ. ತಮ್ಮ ಮಗನಿಗೆ ಬೆತ್ತದಿಂದ ಹೊಡೆದು ಗಾಯಗೊಳಿಸಿರುವ ಶಿಕ್ಷಕಿ ಹಾಗೂ ಶಾಲೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿದ್ಯಾರ್ಥಿ ತಂದೆ ದೂರು ನೀಡಿದ್ದಾರೆ.