ಬೆಂಗಳೂರು: ರಾಜ್ಯದಲ್ಲಿ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿರುವ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ವಿಚಾರಣೆ ನಡೆಸುವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಸಿಬಿಐ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾದ ರಘು ಅವರನ್ನ ವಿಚಾರಣೆಗೆ ಒಳಪಡಿಸಿದೆ. ಕುಮಾರಸ್ವಾಮಿಯವರನ್ನೂ ವಿಚಾರಣೆ ನಡೆಸುವ ಸಂಬಂಧ ಮೂರು ದಿನಗಳ ಹಿಂದೆಯೇ ರಘು ಅವರನ್ನ ಸಿಬಿಐ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದೆ. ರಘು ನೀಡಿದ ಮಾಹಿತಿ ಆಧರಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೂ ಸಹ ಸಿಬಿಐ ನೋಟಿಸ್ ನೀಡಿ ವಿಚಾರಣೆಗೆ ಗುರಿಪಡಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಿ ಗಣ್ಯರು, ಪೊಲೀಸರ ಫೋನ್ ಕದ್ದಾಲಿಕೆ ಮಾಡಲು ಸೂಚಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಹಿಂದೆ ಮಾಜಿ ಕುಮಾರಸ್ವಾಮಿ ಇದ್ದಾರೆಂದು ಪ್ರತಿಪಕ್ಷಗಳ ಮುಖಂಡರು ಆರೋಪಿಸಿದ್ದರು.
ಟೆಲಿಫೋನ್ ಕದ್ದಾಲಿಕೆ ಬಗ್ಗೆ ಸಿಬಿಐ ಈಗಾಗಲೇ ತನ್ನ ತನಿಖೆ ಪ್ರಾರಂಭಿಸಿದೆ. ದೂರವಾಣಿ ಕದ್ದಾಲಿಕೆಗೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಲಾದ ಅಲೋಕ್ ಕುಮಾರ್ ಅವರನ್ನ ಸಿಬಿಐ ಈಗಾಗಲೇ ವಿಚಾರಣೆಗೆ ಗುರಿಪಡಿಸಿದ್ದು, ಇದೀಗ ಕುಮಾರಸ್ವಾಮಿ ಅವರನ್ನೂ ಕೂಡ ವಿಚಾರಣೆಗೆ ಒಳಪಡಿಸಿದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.