ಬೆಂಗಳೂರು: ಪಿಜಿಯೊಂದರಲ್ಲಿ ವಾಸಿಸುತ್ತಿದ್ದ ಮೂವರು ಖಾಸಗಿ ಕಂಪನಿ ಉದ್ಯೋಗಿಗಳಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಪಿಜಿ ಬಿಟ್ಟು ಹೊರಡುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಸೋಂಕಿತರ ಸ್ನೇಹಿತನಿಗೆ ಪಿಜಿ ಮಾಲೀಕ ಸಂಬಂಧಿ ಚಾಕು ಇರಿದಿರುವ ಘಟನೆ ನಡೆದಿದೆ.
ಜೆ.ಪಿನಗರದ ನಿವಾಸಿ ಅತುಲ್ ಗಾಯಗೊಂಡಿದ್ದು, ಮೈಕೋಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪಿಜಿ ಮಾಲೀಕನ ಸಂಬಂಧಿ ಸಿಜೋ ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ಅತುಲ್ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸ್ನೇಹಿತರಾದ ಮೋಹಿತ್, ರೇಗಿತ್, ಜಿಶ್ನೇದ್ ಬಿಳೇಕನಹಳ್ಳಿಯ ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. ಇತ್ತೀಚಿಗೆ ಮೂವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಈ ಸಂಗತಿ ಅರಿತ ಪಿಜಿ ಮಾಲೀಕರ ಸಂಬಂಧಿ ಸಿಜೋ ಜಾರ್ಜ್ ಪಿಜಿ ಖಾಲಿ ಮಾಡುವಂತೆ ತಾಕೀತು ಮಾಡಿದ್ದ.
ಸೋಂಕಿತರು ಮೇ 18ರಂದು ರಾತ್ರಿ ಸ್ನೇಹಿತ ಅತುಲ್‌ಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದರು. ಅತುಲ್ ಇವರ ಪಿಜಿ ಬಳಿ ಬಂದು ಸಿಜೋ ಜಾರ್ಜ್ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ಸಿಜೋ ಜಾರ್ಜ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ ಬರ್ಬರ ಕೊಲೆ: ರೌಡಿಶೀಟರ್ ತಲೆ ಎರಡು ಹೋಳು ಮಾಡಿ ದುಷ್ಕರ್ಮಿಗಳು ಪರಾರಿ!