ಬೆಂಗಳೂರು: ಸರ್ಕಾರದ ವಿರುದ್ಧ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದು, ಬಂಕ್ ಮಾಲೀಕರು ತೈಲ ಖರೀದಿ ಮಾಡದೆ ಸಾಂಕೇತಿಕವಾಗಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ ಎಂದಿನಂತೆ ಪೆಟ್ರೋಲ್ ಬಂಕ್‌ಗಳು ತೆರೆದಿದ್ದು, ಮಧ್ಯಾಹ್ನದ ವೇಳೆಗೆ ತೈಲ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ತೈಲ ಬೆಲೆಯ ಮೇಲಿನ ಸುಂಕವನ್ನು ದಿಢೀರ್ ಇಳಿಸಿರುವುದರಿಂದ ನಷ್ಟ ಉಂಟಾಗಿರುವುದಾಗಿ ಪೆಟ್ರೋಲ್ ಬಂಕ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೈಲ ಖರೀದಿ ಮಾಡದೆ ಪ್ರತಿಭಟಿಸುತ್ತಿರುವ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಕೆಲವು ಕಡೆಗಳಲ್ಲಿ ಬೆಳಗ್ಗೆಯಿಂದಲೇ ಪೆಟ್ರೋಲ್ ಬಂಕ್‌ಗಳು ಬಂದ್ ಆಗಿವೆ. ಇನ್ನೂ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಇರುವ ತೈಲ ಖಾಲಿಯಾದರೆ ತೈಲ ಪೂರೈಕೆ ಸ್ಥಗಿತಗೊಳ್ಳಲಿದೆ.
ಬೇಡಿಕೆಗೆ ತಕ್ಕಂತೆ ತೈಲ ಪೂರೈಕೆ ಮಾಡದ ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ಕಂಪನಿಗಳ ವಿರುದ್ಧವೂ ಬಂಕ್ ಮಾಲೀಕರು ಸಮರ ಸಾರಿದ್ದಾರೆ. ಅಗತ್ಯಕ್ಕನುಗುಣವಾಗಿ ತೈಲ ಪೂರೈಕೆ ಮಾಡುವಂತೆ ಮಾಲೀಕರು ಒತ್ತಾಯಿಸಿದ್ದಾರೆ. ಇಂದಿನ ಮುಷ್ಕರದಲ್ಲಿ ಶೆಲ್, ನಾಯರಾ ಸೇರಿ ಹಲವು ಖಾಸಗಿ ಪೆಟ್ರೋಲಿಯಂ ಕಂಪನಿಗಳು ಭಾಗಿಯಾಗಿಲ್ಲ. ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ ಎಂದಿನಂತೆ ಪೆಟ್ರೋಲ್, ಡೀಸೆಲ್ ಸಿಗುತ್ತಿದೆ.
ಇದನ್ನೂ ಓದಿ: ಬೆಳಗಾವಿ ಶಾಹಿ ಮಸೀದಿ-ಮಂದಿರ ವಿವಾದ: ಪ್ರಾದೇಶಿಕ ಆಯುಕ್ತರ ಭೇಟಿಯಾದ ಮುಸ್ಲಿಂ ಮುಖಂಡರು