ಬೆಂಗಳೂರು: ರಾಜ್ಯದ ನ್ಯಾಯಮೂರ್ತಿಗಳು ತನ್ನ ಪ್ರಕರಣದ ವಿಚಾರಣೆಯನ್ನು ನಡೆಸಬಾರದು, ಬದಲಿಗೆ ಹೊರರಾಜ್ಯದ ನ್ಯಾಯಮೂರ್ತಿಗಳು ವಿಚಾರಣೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ, ವ್ಯಕ್ತಿಗೆ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮೈಸೂರಿನ ಸೋಸಲೆ ವ್ಯಾಸರಾಜ ಮಠದ ವಿರುದ್ಧ ಕೆಲ ಆರೋಪಗಳನ್ನು ಮಾಡಿ ಅರ್ಜಿ ಸಲ್ಲಿಸಿದ್ದ ವಿ. ಗುರುರಾಜ್ ಎಂಬುವರು ತಮ್ಮ ಅರ್ಜಿಯನ್ನು ರಾಜ್ಯದ ನ್ಯಾಯಮೂರ್ತಿಗಳು ನಡೆಸಬಾರದು, ಅನ್ಯ ರಾಜ್ಯದಿಂದ ಬಂದಿರುವ ನ್ಯಾಯಮೂರ್ತಿಗಳು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನ್ಯಾಯಮೂರ್ತಿಗಳ ವಿರುದ್ಧ ಇಂತಹ ಅನುಮಾನ ವ್ಯಕ್ತಪಡಿಸುವುದು ಹಾಗೂ ನಂಬಿಕೆ ಇಲ್ಲದಂತೆ ವರ್ತಿಸುವುದು ಸರಿಯಲ್ಲ. ಜತೆಗೆ ಇದೊಂದು ಅಕ್ಷೇಪಾರ್ಹ ನಡವಳಿಕೆ. ಹೊರ ರಾಜ್ಯದಿಂದ ಬಂದ ನ್ಯಾಯಮೂರ್ತಿಗಳು ಕೂಡ ಇಲ್ಲಿಗೆ ಬಂದು, ವಾಸವಿದ್ದು ಕೆಲಸ ಪ್ರಾರಂಭಿಸಿದ ಮೇಲೆ ಇಲ್ಲಿನವರೇ ಆಗುತ್ತಾರೆ. ಹೀಗಾಗಿ ಅನಗತ್ಯವಾಗಿ ನ್ಯಾಯಮೂರ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಅರ್ಜಿದಾರನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಓದಿ:ಜಿಪಂ ಅಭಿವೃದ್ಧಿ ಕಾರ್ಯಗಳ ಹಿನ್ನಡೆಗೆ ಸಿಎಂ ಅಸಮಾಧಾನ: ಇಬ್ಬರು ಅಧಿಕಾರಿಗಳ ಅಮಾನತಿಗೆ ಸೂಚನೆ
ದಂಡದ ಹಣವನ್ನು ಬೀದಿ ಬದಿ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳ ಕಲ್ಯಾಣಕ್ಕೆ ಬಳಸಿಕೊಳ್ಳುವಂತೆ ನಿರ್ದೇಶಿಸಿದ ಪೀಠ, ಅರ್ಜಿದಾರರ ಪರ ವಕಾಲತ್ತು ಹಾಕಿದ್ದ ವಕೀಲರಿಗೂ ತರಾಟೆಗೆ ತೆಗೆದುಕೊಂಡಿತು. ವಕೀಲರಾಗಿ ನ್ಯಾಯಾಲಯವನ್ನು ಗೌರವಿಸಬೇಕು. ಗೌರವ ಮೂಡುವಂತೆ ಕಕ್ಷಿದಾರರ ಜೊತೆ ನಡೆದುಕೊಳ್ಳಬೇಕು. 9 ವರ್ಷ ಅನುಭವವಿದ್ದೂ, ಹೀಗೆ ಅರ್ಜಿದಾರರ ತಾಳಕ್ಕೆ ತಕ್ಕಂತೆ ವರ್ತಿಸಿ, ಅವರ ಕೋರಿಕೆ ಒಳಗೊಂಡ ಅರ್ಜಿಗೆ ಸಹಿ ಮಾಡಿರುವುದು ಸೂಕ್ತವಲ್ಲ ಎಂದು ಎಚ್ಚರಿಕೆ ನೀಡಿತು. ಜತೆಗೆ ಮುಂದೆ ಇಂತಹ ಮಾದರಿಯ ಪ್ರಕರಣಗಳು ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡುವುಂತೆ ತಿಳಿ ಹೇಳಿತು.