ಬೆಂಗಳೂರು: ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸಿದ ಬಳಿಕ ಅವರನ್ನು 'ಆರ್ಥಿಕ ಹಿಂದುಳಿದ ವರ್ಗ' (ಇಡಬ್ಲ್ಯೂಎಸ್)ಕ್ಕೆ ಸೇರಿಸಿ ರಾಜ್ಯ ಸರ್ಕಾರ 2023ರ ಮಾರ್ಚ್ 27ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವ ತನಕ ಆದೇಶ ಜಾರಿಗೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿದಾರರ ಪರ ವಕೀಲ ಆರ್. ಕೋತ್ವಾಲ್ ವಕಾಲತ್ತು ವಹಿಸಿದ್ದಾರೆ.
ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಿ ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯೂಎಸ್)ಕ್ಕೆ ಸೇರಿಸಿ 2023ರ ಮಾ.24ರಂದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಸರ್ಕಾರದ ಈ ತರಾತುರಿ ಮತ್ತು ದೋಷಪೂರಿತ ನಿರ್ಧಾರ ಮುಸ್ಲಿಮರನ್ನು ಇಡಬ್ಲ್ಯೂಎಸ್ ವರ್ಗಗಳಿಗೆ ನಿಗದಿಪಡಿಸಲಾದ ಶೇ.10ರ ಮೀಸಲಾತಿಯಲ್ಲಿ ಸಾಮಾನ್ಯ ವರ್ಗದಡಿ ಪೈಪೋಟಿ ಮಾಡಲು ತಳ್ಳಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರಾಜ್ಯದ ಬಲಿಷ್ಠ ಸಮುದಾಯಗಳಾದ ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತರಿಗೆ ತಲಾ ಶೇ.2ರಂತೆ ಹಂಚಿಕೆ ಮಾಡಲಾಗಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ರಾಜಕೀಯ ಪ್ರೇರಿತ ನಿರ್ಧಾರವಾಗಿದೆ. ಎಸ್ಸಿ-ಎಸ್ಟಿ ವರ್ಗಗಳಿಗಿಂತ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡುವಂತಹ ಯಾವ ಸಂದರ್ಭವನ್ನೂ ರಾಜ್ಯ ಸರ್ಕಾರ ಬಿಡುತ್ತಿಲ್ಲ. ಮುಸ್ಲಿಂ ಸಮುದಾಯದ ವಿರುದ್ಧ ಹಲವು ಬಗೆಯ ದೌರ್ಜನ್ಯಗಳ ಜೊತೆಗೆ ಇದೀಗ ಮೀಸಲಾತಿಯನ್ನೂ ಕಿತ್ತುಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 2ಬಿ ಮೀಸಲಾತಿ ರದ್ದು ಮತ್ತು ಪ್ರವರ್ಗ 3ಎ ಮತ್ತು 3ಬಿಗೆ ಬದಲಾಗಿ 2ಸಿ ಮತ್ತು 2ಡಿ ಎಂದು ಹೊಸ ಪ್ರವರ್ಗ ಸೃಜಿಸುವ ಜೊತೆಗೆ 3ಎ ಮತ್ತು 3ಬಿಯಲ್ಲಿ ಬರುತ್ತಿದ್ದ ಜಾತಿಗಳನ್ನು ಹೊಸ ಪ್ರವರ್ಗಗಳಾದ 2ಸಿ ಮತ್ತು 2ಡಿ ಅಡಿ ಸೇರ್ಪಡೆ ಮಾಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು.
ಈ ಆದೇಶದ ಅನುಸಾರ ಪ್ರವರ್ಗ 1ಕ್ಕೆ ಶೇ. 4 ಮೀಸಲಾತಿ, ಪ್ರವರ್ಗ 2ಎಗೆ ಶೇ. 15 ರಷ್ಟು ಮೀಸಲಾತಿ, 2ಬಿ(ಶೂನ್ಯ), 2ಸಿ ಶೇ.6, 2ಡಿ ಶೇ.7 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಆ ಮೂಲಕ ಒಬಿಸಿ ಸಮುದಾಯಕ್ಕೆ ಶೇ. 32 ರಷ್ಟು ಮೀಸಲಾತಿಯನ್ನು ಮರು ವರ್ಗೀಕರಣ ಮಾಡಲಾಗಿದೆ. ರಾಜ್ಯದ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ಮರು ವರ್ಗೀಕರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅನೂರ್ಜಿತ