ಬೆಂಗಳೂರು : ವಿವಾಹಿತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜೈಲು ಸೇರಿರುವ ಆರೋಪಿಯೋರ್ವ ತಾನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಿದ್ದತೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ. ಕೊಪ್ಪಳದ ಕಾರಟಗಿ ತಾಲೂಕಿನ ಹೊಳಿಯಪ್ಪ ಎಂಬಾತ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಶಿವಶಂಕರ ಅಮರಣ್ಣವರ ಅವರಿದ್ದ ಏಕಸದಸ್ಯ ಪೀಠ, ಆರೋಪಿಯ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
ಆರೋಪಿ ವಿರುದ್ಧ ಗುರುತರವಾದ ಆರೋಪವಿದೆ. ಜೀವಾವಧಿ ಶಿಕ್ಷೆಗೂ ಒಳಗಾಗಬಹುದಾಗಿದೆ. ಆತ ಬಿಎ-ಬಿ.ಎಡ್ ಓದಿದ್ದಾನೆ. ಎಫ್‌ಡಿಎ-ಎಸ್ ಡಿಎ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ಜಾಮೀನು ನೀಡದಿದ್ದರೆ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಕೋವಿಡ್ ಕಾರಣಕ್ಕೆ ವಿಚಾರಣೆ ವಿಳಂಬವಾಗುವುದರಿಂದ ಜಾಮೀನು ನೀಡಬೇಕು ಎಂಬ ಅಂಶಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಅಲ್ಲದೇ, ಪರೀಕ್ಷೆ ಬರೆಯುವುದಾದರೆ ಜೈಲಾಧಿಕಾರಿಗಳಿಂದ ಅನುಮತಿ ಕೋರಬಹುದು ಎಂದು ಸೂಚಿಸಿ ಅರ್ಜಿ ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ : ಕೊಪ್ಪಳದ ಕಾರಟಗಿ ಪೊಲೀಸ್ ಠಾಣೆಗೆ ಹೊಳಿಯಪ್ಪನ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆ, ತನಗೆ ವಿವಾಹವಾಗಿದೆ. ಪತಿ ಕುಟುಂಬದೊಂದಿಗೆ ವಾಸವಿದ್ದೇನೆ. ಹಾಗಿದ್ದೂ ಆರೋಪಿ ತನಗೆ ಆತನ ಮೊಬೈಲ್ ನಂಬರ್ ನೀಡಿ ಮಾತಾಡುವಂತೆ, ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದ. ಆತನ ಮನವಿ ತಿರಸ್ಕರಿಸಿದ್ದೆ. 2019ರ ಮಾರ್ಚ್ 28ರಂದು ಬಹಿರ್ದೆಸೆಗೆ ಹೋದಾಗ ತನ್ನನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ. ಈ ಸಂಬಂಧ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಆರೋಪಿಸಿ ದೂರು ನೀಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆ ಬಳಿಕ ಆರೋಪಿ ಹೊಳಿಯಪ್ಪ ತನಗೆ ಜಾಮೀನು ನೀಡುವಂತೆ ಕೋರಿ 2020ರಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ. ತಾನು ಅತ್ಯಾಚಾರ ಎಸಗಿಲ್ಲ, ಅದು ಒಪ್ಪಿತ ಲೈಂಗಿಕ ಕ್ರಿಯೆ ಎಂದು ವಾದಿಸಿದ್ದ. ವಾದ ಪುರಸ್ಕರಿಸದ ಪೀಠ ಅರ್ಜಿ ವಜಾ ಮಾಡಿತ್ತು. ಆ ಬಳಿಕ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದ ಆರೋಪಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಬೇಕೆಂಬ ಕಾರಣ ನೀಡಿ ಜಾಮೀನು ಕೋರಿದ್ದ.
ಓದಿ:ನಮ್ಮದು ಜಾತಿ ಪಕ್ಷವಲ್ಲ, ಸಿದ್ದಾಂತದ ಪಕ್ಷ: ಸಿಎಂ ಪರ ನಿಂತ ಮಠಾಧೀಶರಿಗೆ ಸಿ.ಟಿ. ರವಿ ಟಾಂಗ್