ಬೆಂಗಳೂರು: ವೈಶ್ಯಾಗೃಹದಲ್ಲಿ ಸಿಲುಕಿರುವ ಅಪ್ರಾಪ್ತೆ ತನ್ನೊಂದಿಗೆ ಒತ್ತಾಯಪೂರಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ ಎಂಬುದಾಗಿ ವ್ಯಕ್ತಿಯೊಬ್ಬರ ವಿರುದ್ಧ ದೂರು ನೀಡಿದಲ್ಲಿ ಆರೋಪಿಯನ್ನು ಗ್ರಾಹಕ ಎಂದು ಪರಿಗಣಿಸಿ ಪ್ರಕರಣದಿಂದ ಕೈ ಬಿಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಮಂಗಳೂರಿನ ವೇಶ್ಯಾಗೃಹಕ್ಕೆ ಭೇಟಿ ನೀಡಿದ್ದ ಕೇರಳದ ಕಾಸರಗೋಡು ಜಿಲ್ಲೆ ಮೂಲದ ಮೊಹಮ್ಮದ್ ಷರೀಫ್ ಅಲಿಯಾಸ್ ಫಾಹಿಂ ಹಜಿ(45) ಎಂಬುವರ ತನ್ನ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಪ್ರಕ್ರಿಯೆ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ವೇಶ್ಯಾಗೃಹಗಳಲ್ಲಿ ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಳ್ಳುವವರನ್ನು ಗ್ರಾಹಕರು ಎಂದು ಪರಿಗಣಿಸಬಹುದು. ಆದರೆ, ಅಪ್ರಾಪ್ತರಾದ ಸಂತ್ರಸ್ತರೇ ಆರೋಪಿ ವಿರುದ್ಧ ದೂರು ನೀಡಿದಲ್ಲಿ ಗ್ರಾಹಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪ್ರಕರಣ 18 ವರ್ಷದ ಮೇಲ್ಪಟ್ಟ ಸಂತ್ರಸ್ತೆ ದಾಖಲಿಸಿರುವ ದೂರು ಅಲ್ಲ. ಜತೆಗೆ, ಪೊಲೀಸರ ದಾಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಕರಣವೂ ಅಲ್ಲ. ಹೀಗಾಗಿ ಪ್ರಕರಣ ರದ್ದು ಪಡಿಸುವುದಕ್ಕೆ ಅವಕಾಶವಿಲ್ಲ. ಸಂತ್ರಸ್ತೆ ಒಬ್ಬರೇ ಆಗಿದ್ದರೂ, ಅವರ ವಿರುದ್ಧ ಅಪರಾಧ ಕೃತ್ಯಗಳು ವಿಭಿನ್ನವಾಗಿವೆ. ಹೀಗಾಗಿ ಒಂದೇ ಪ್ರಕರಣ ದಾಖಲಿಸಬೇಕು, ಒಂದೇ ಅಪರಾಧದಲ್ಲಿ ಆರೋಪಿಗಳನ್ನು ಸೇರಿಸಬೇಕು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟು ಅರ್ಜಿ ವಜಾಗೊಳಿಸಿದೆ.
ಅರ್ಜಿದಾರರ ವಾದವೇನು: ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಪ್ರಕರಣದಲ್ಲಿ ಅರ್ಜಿದಾರರು ಗ್ರಾಹಕರಾಗಿದ್ದಾರೆ. ಆದರೆ, ಮಾನವ ಕಳ್ಳಸಾಗಾಣೆ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ತನಿಖಾಧಿಕಾರಿಗಳು ಒಂದೇ ಪ್ರಕರಣದಲ್ಲಿ ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದರೆ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದರು. ಆದರೆ, ಹೈಕೋರ್ಟ್ ವಾದವನ್ನು ತಳ್ಳಿಹಾಕಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು: ಚಿಕ್ಕಮಗಳೂರು ಮೂಲದ 17 ವರ್ಷದ ಅಪ್ರಾಪ್ತೆ ಮಂಗಳೂರಿನ ತಮ್ಮ ಸಂಬಂಧಿಕರ ಮನೆಯಲ್ಲಿದ್ದು ವಿದ್ಯಾಬ್ಯಾಸದಲ್ಲಿ ತೊಡಗಿದ್ದರು. ಆಕೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ರೀತಿಯಲ್ಲಿ ಪರಿಚಯಿಸಿಕೊಂಡು ಕೆಲವ ಆರೋಪಿಗಳು ವೈಶ್ಯಾವಾಟಿಕೆಗೆ ಬಳಸಿಕೊಂಡಿದ್ದರು. ಅಲ್ಲದೇ, ಇತರರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುನ್ನು ವಿಡಿಯೋ ಮಾಡಿಕೊಂಡು ಮತ್ತೆ ಮತ್ತೆ ಇದೇ ಕೃತ್ಯದಲ್ಲಿ ಭಾಗಿಯಾಗಲು ಒತ್ತಾಯಿಸುತ್ತಿದ್ದರು. ಇಲ್ಲ ಎಂದರೆ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹಾಕುವ ಬೆದರಿಕೆ ಹಾಕುತ್ತಿದ್ದರು.
ಪ್ರಕರಣದ ಅರ್ಜಿದಾರರ ಅಪ್ರಾಪ್ತರಾಗಿರುವ ಸಂತ್ರಸ್ತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ ವಿಡಿಯೋ ರೆಕಾರ್ಡ್ ಸಹಾ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದರು. ಇದರಿಂದ ತಪ್ಪಿಸಿಕೊಂಡಿದ್ದ ಸಂತ್ರಸ್ತ ಬಾಲಕಿ ಪೋಷಕರಿಗೆ ಈ ಅಂಶವನ್ನು ತಿಳಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅರ್ಜಿದಾರರು ಸೇರಿದಂತೆ ಇತರ ಆರೋಪಿಗಳ ವಿರುದ್ಧ ಮಾನವ ಕಳ್ಳಸಾಗಾಣೆ(ನಿಯಂತ್ರಣ) ಕಾಯಿದೆ, ಅಪ್ರಾಪ್ತ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿಯಲ್ಲಿ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಮೆಟ್ರೋಗೆ ಮರಗಳ ಬಲಿ: ಪರ್ಯಾಯ ಸಸಿ ನೆಡದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ