ಬೆಂಗಳೂರು: ಹೈಕೋರ್ಟ್ ಸೇರಿದಂತೆ ನಗರದ ಯಾವುದೇ ಕೋರ್ಟ್ಗೆ ಆಗಮಿಸುವ ಕಕ್ಷಿದಾರರು ಗುರುವಾರದಿಂದ ತಮ್ಮ ವಕೀಲರು ದೃಢೀಕರಿಸಿದ ಅನುಮತಿ ಪತ್ರ ತೆಗೆದುಕೊಂಡು ನ್ಯಾಯಾಲಯಗಳ ಆವರಣ ಪ್ರವೇಶಿಸಬೇಕು. ಇಲ್ಲವಾದರೆ ಅವಕಾಶ ನೀಡುವಂತಿಲ್ಲ ಎಂದು ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಈ ವಿಚಾರ ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರು, ಈ ಸಂಬಂಧ ಬುಧವಾರ ಮಧ್ಯಾಹ್ನ ಬೆಂಗಳೂರು ವಕೀಲರ ಸಂಘದ ಜೊತೆ ಚರ್ಚಿಸಲಾಗಿದೆ. ಇಂತಹ ಸನ್ನಿವೇಶದಲ್ಲೂ ನಿನ್ನೆ (ಮಾ.17) 14 ಸಾವಿರ ಜನರು ಕೋರ್ಟ್ಗಳಿಗೆ ಭೇಟಿ ನೀಡಿದ್ದಾರೆ ಎಂಬುದು ಕೊಂಚ ಆತಂಕಕಾರಿ ವಿಚಾರ ಎಂದು ಹೇಳಿದರು.
ಜನದಟ್ಟಣೆ ನಿಯಂತ್ರಣ ಮಾಡದಿದ್ದರೆ ವೈರಸ್ ತಡೆಗಟ್ಟುವುದು ಕಷ್ಟ. ಹೀಗಾಗಿ ಕಕ್ಷಿದಾರರ ಹಾಜರಿ ಕಡ್ಡಾಯ ಎಂದಾದರೆ ಮಾತ್ರ ಅವರು ಕೋರ್ಟ್ ಪ್ರವೇಶಿಸಬೇಕು. ಈ ವೇಳೆ, ಅವರ ವಕೀಲರು ದೃಢೀಕರಿಸಿದ ಪತ್ರ ತರಲೇ ಬೇಕು. ನ್ಯಾಯಾಲಯದ ಭದ್ರತಾ ಸಿಬ್ಬಂದಿ ಆವರಣ ಪ್ರವೇಶಿಸಲು ಅನುಮತಿಸಬೇಕು ಎಂದರು. ಸರ್ಕಾರಿ ಅಧಿಕಾರಿಗಳು, ಪೊಲೀಸರು ಮತ್ತು ಸರ್ಕಾರಿ ವಕೀಲರಿಗೆ ಈ ನಿರ್ಬಂಧವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದಾರೆ.
ಥರ್ಮಲ್ ಸ್ಕ್ರೀನಿಂಗ್ ವಿರೋಧಿಸಿದ ವಿದೇಶಿ ಮಹಿಳೆ: ಮಧ್ಯಾಹ್ನ ಹೈಕೋರ್ಟ್ಗೆ ಆಗಮಿಸಿದ ಆಸ್ಟ್ರೇಲಿಯಾ ಮಹಿಳೆಯೊಬ್ಬರಿಗೆ ಭದ್ರತಾ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ಮುಂದಾಗಿದ್ದರು. ಇದಕ್ಕೆ ಮಹಿಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನನ್ನ ಅನುಮತಿ ಇಲ್ಲದೇ ನೀವು ಇಂತಹ ಪರೀಕ್ಷೆಗಳನ್ನು ಮಾಡುವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತ ಹೈಕೋರ್ಟ್ನ ಭದ್ರತಾ ಸಿಬ್ಬಂದಿ ವೈದ್ಯರನ್ನು ಕರೆಸಿ ಮಹಿಳೆಗೆ ಬುದ್ದಿ ಹೇಳಿ, ಹೊರಗೆ ಕಳುಹಿಸಿದರು.