ಬೆಂಗಳೂರು : ಕನ್ನಡ ಸಿನಿಮಾ ಮತ್ತು ಧಾರಾವಾಹಿಗಳ ಒಳಾಂಗಣ ಮತ್ತು ಹೊರಾಂಗಣದ ಚಿತ್ರೀಕರಣಕ್ಕಾಗಿ ಅನುಮತಿ ನೀಡಿರುವ ರಾಜ್ಯ ಸರ್ಕಾರ ಕಡ್ಡಾಯವಾಗಿ ಪಾಲಿಸಬೇಕಿರುವ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮಾರ್ಗಸೂಚಿ ಏನು? :
ಸಿನಿಮಾ, ಧಾರಾವಾಹಿಗಳ ಎಡಿಟಿಂಗ್, ಡಬ್ಬಿಂಗ್, ಸೌಂಡ್ ಮಿಕ್ಸ್, ವಿಷುವಲ್ ಎಫೆಕ್ಟ್, ಕಂಪ್ಯೂಟರ್ ಗ್ರಾಫಿಕ್ಸ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಪ್ರೊಡಕ್ಷನ್ ಪ್ಲಾನಿಂಗ್ ಸೇರಿದಂತೆ ಇತರೆ ಚಟುವಟಿಕೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಣೆ ಮಾಡಬೇಕು. ಚಿತ್ರೀಕರಣ ಸ್ಥಳದಲ್ಲಿ ಸ್ಯಾನಿಟೈಜಿಂಗ್ ಸಲಕರಣೆಗಳ ವ್ಯವಸ್ಥೆ ಮಾಡಬೇಕು. ಶೂಟಿಂಗ್ ಆವರಣಕ್ಕೆ ಪ್ರವೇಶಿಸುವ ಮೊದಲು ಇನ್‌ಫ್ರಾರೆಡ್ ಥರ್ಮಾಮೀಟರ್ ಮೂಲಕ ಜ್ವರ, ಕೆಮ್ಮು ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.
ಪ್ರತಿಯೊಬ್ಬರಿಂದಲೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಣಾ ಪತ್ರಗಳನ್ನು ಪಡೆಯುವ ಜವಾಬ್ದಾರಿ ನಿರ್ಮಾಪಕರಿಗೆ ವಹಿಸಲಾಗಿದೆ. ಚಿತ್ರೀಕರಣ ಸ್ಥಳ ಪ್ರವೇಶಿಸುವ ಪ್ರತಿಯೊಬ್ಬರಿಗೂ ತರಬೇತಿ ಪಡೆದ ವ್ಯಕ್ತಿಯೊಬ್ಬರಿಂದ ಕಡ್ಡಾಯವಾಗಿ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಸ್ಕ್ರೀನಿಂಗ್ ಮಾಡಿಸಬೇಕು. ಮೇಕಪ್ ಕೊಠಡಿ, ವಿಶ್ರಾಂತಿ ಪಡೆಯುವ ಸ್ಥಳ ಸೇರಿದಂತೆ ಎಲ್ಲಾ ಸಂದರ್ಭದಲ್ಲಿಯೂ ಸ್ವಚ್ಛವಾಗಿರಿಸಬೇಕು. ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಶೂಟಿಂಗ್ ಸ್ಥಳಗಳು ಮತ್ತು ಇತರೆಡೆಗಳಲ್ಲಿ ನಿರ್ಮಾಣ ಸಂಸ್ಥೆಗಳು ಸಾಧ್ಯವಾದಷ್ಟು ಕಡಿಮೆ ಸಿಬ್ಬಂದಿಯನ್ನು ಬಳಸಬೇಕು. ಯಾವುದೇ ಕಲಾವಿದ/ಸಿಬ್ಬಂದಿ 10 ವರ್ಷಕ್ಕಿಂತ ಕಡಿಮೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದ ಹೊರತು ಚಿತ್ರೀಕರಣ ಸೆಟ್‌ಗಳಲ್ಲಿ ಭಾಗಿಯಾಗಲು ಅವಕಾಶ ನೀಡಬಾರದು ಎಂದು ಸರ್ಕಾರ ನಿರ್ದೇಶನ ನೀಡಿದೆ.
ಸಿಬ್ಬಂದಿಗೆ ಸಾಧ್ಯ ಇರುವ ಕಡೆ ಸಾರ್ವಜನಿಕ ಸಾರಿಗೆ ಬದಲಿಗೆ ಸ್ವಂತ ವಾಹನ ಅಥವಾ ಕಂಪನಿ ಒದಗಿಸುವ ಸಾರಿಗೆಯನ್ನು ಬಳಸಿಕೊಂಡು ಪ್ರಯಾಣಿಸಬೇಕು. ಕಾರುಗಳನ್ನು ಬಳಸುವ ಮೊದಲು ಮತ್ತು ನಂತರ ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸಬೇಕು. ಚಾಲಕರು ವಾಹನದಲ್ಲಿಯೇ ಉಳಿದುಕೊಳ್ಳಬೇಕು. ವಾಹನ ಬಳಸುವ ಮೊದಲು ಮತ್ತು ನಂತರ ಕೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಚಿತ್ರೀಕರಣವನ್ನು ಸೆಟ್ ಒಳಗೆ ನಡೆಸಬೇಕು. ಹೊರಾಂಗಣ ಚಿತ್ರೀಕರಣವನ್ನು ಸಾಧ್ಯವಾದಷ್ಟು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಶೂಟಿಂಗ್‌ಗೆ ಅವಕಾಶ ನೀಡಲಾಗಿದೆ. ಕಂಟೈನ್ಮೈಂಟ್ ವಲಯಗಳಿಂದ ಬರುವ ಸಿಬ್ಬಂದಿಗೆ ಅವಕಾಶ ಇರುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮೇಕಪ್ ಮತ್ತು ವಿನ್ಯಾಸಗಾರರು ಸೂಕ್ತವಾದ ಪಿಪಿಇ ಧರಿಸಬೇಕು. ಪ್ರತಿ ಮೇಕಪ್ ನಂತರವೂ ಕೈ ಸ್ಯಾನಿಟೈಜಿಂಗ್ ಮಾಡಬೇಕು. ಅಡುಗೆ ತಯಾರಿಸುವಾಗ ಮತ್ತು ಸರಬರಾಜು ಮಾಡುವಾಗ ಎಲ್ಲಾ ಅಡುಗೆ ಸಿಬ್ಬಂದಿ ಸುರಕ್ಷಿತ ಸಲಕರಣೆಯನ್ನು ಬಳಕೆ ಮಾಡಬೇಕು. ಎಲ್ಲಾ ತ್ಯಾಜ್ಯವನ್ನು ನೇರವಾಗಿ ಸ್ವತಃ ನಿಗದಿತ ಕಸದ ಬುಟ್ಟಿಯಲ್ಲಿ ಹಾಕಬೇಕು ಮತ್ತು ಬೇರೊಬ್ಬರು ಈ ಕೆಲಸ ಮಾಡಲು ಅವಕಾಶ ಕಲ್ಪಿಸಬಾರದು ಎಂದು ಸರ್ಕಾರ ಸೂಚನೆ ನೀಡಿದೆ.