ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಈಗ ಕಟ್ಟಡಗಳಿಂದ ತುಂಬಿ ಕಾಂಕ್ರೀಟ್ ನಗರವಾಗಿ ಮಾರ್ಪಡುತ್ತಿದೆ. ಸರ್ಕಾರ ಕಬ್ಬನ್ ಪಾರ್ಕ್ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದನ್ನು ವಿರೋಧಿಸಿ ಇಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.
ಕಬ್ಬನ್ ಪಾರ್ಕ್ ಉಳಿಸುವಂತೆ ಎಲ್ಲರೂ ಒಟ್ಟಾಗಿ ಧ್ವನಿಯಾದರು. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಹಸಿರು ಮನೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಬಂದರೆ ಉದ್ಯಾನಕ್ಕೆ ಹಾನಿಯಾಗಲಿದೆ ಅಂತ ಆಕ್ರೋಶ ಹೊರ ಹಾಕಿದರು.
ಈ ಸಂಬಂಧ ಈಗಾಗಲೇ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ನೀಡಲಾಗಿದ್ದು, ಕೇಸ್ ಇನ್ನೂ ಪೇಡಿಂಗ್ನಲ್ಲಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಗುವುದು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ತಿಳಿಸಿದರು.
ಇನ್ನು ಇದೇ ವೇಳೆ ಪುಟ್ಟ ಬಾಲಕಿಯು ಈ ಮಾನವ ಸರಪಳಿಯಲ್ಲಿ ಭಾಗಿಯಾಗಿ, ನಮಗಾಗಿ ಕಬ್ಬನ್ ಪಾರ್ಕ್ ಉಳಿಸಿ ಅಂತ ಮನವಿ ಮಾಡಿದಳು. ಅದೇನೆ ಇರಲಿ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಈಗ ಗಗನಚುಂಬಿ ಕಟ್ಟಡಗಳ ನಗರವಾಗಿ ಮಾರ್ಪಡುತ್ತಿದೆ. ಹಸಿರು ಮಾಯವಾಗಿ ಮುಂದಿನ ದಿನಗಳಲ್ಲಿ ಸ್ವಚ್ಛ ಗಾಳಿಗೆ ಪರದಾಡಬೇಕಾಗುತ್ತೆ.