ಬೆಂಗಳೂರು : ಜಲಸಂಪನ್ಮೂಲ ಇಲಾಖೆಯಲ್ಲಿ 2019ರ ಜುಲೈನಿಂದ 2020ರ ಮಾರ್ಚ್ ಅಂತ್ಯದವರೆಗೆ 14,252.82 ಕೋಟಿ ರೂ. ಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, 15,424 ಹೆಕ್ಟೇರ್ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ. ಜಲ ಸಂಪನ್ಮೂಲ ಇಲಾಖೆಗೆ 14,969.28 ಕೋಟಿ ಪರಿಷ್ಕೃತ ಅನುದಾನವಿದ್ದು, ಮೇ ಅಂತ್ಯಕ್ಕೆ 2,313.28 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಉಪಯೋಜನೆಯಾಗಿರುವ ಕೊಪ್ಪಳ ಏತ ನೀರಾವರಿ ಯೋಜನೆಯಡಿ ಜಿಲ್ಲೆಯಲ್ಲಿ 45, ಬಾಗಲಕೋಟೆ ಜಿಲ್ಲೆಯಲ್ಲಿ 15, ಗದಗ ಜಿಲ್ಲೆಯಲ್ಲಿ 12 ಕೆರೆಗಳನ್ನು ತುಂಬಿಸುವ 1,864.04 ಕೋಟಿ ಮೊತ್ತದ ಕಾಮಗಾರಿಗಳನ್ನು ಮೂರು ಪ್ಯಾಕೇಜ್ ಅಡಿ ಗುತ್ತಿಗೆಗೆ ವಹಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಮಹದಾಯಿ ಜಲವಿವಾದ ನ್ಯಾಯಾಧಿಕರಣ ಅಂತಿಮ ತೀರ್ಪಿನಲ್ಲಿ, ಕಳಸ ನಾಲಾ ತಿರುವು ಯೋಜನೆಗೆ 1.72 ಟಿಎಂಸಿ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 2.18 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು ಯೋಜನೆಗಳ ಅನುಷ್ಠಾನಕ್ಕಾಗಿ 1677 .30 ಕೋಟಿ ಮೊತ್ತದ ಅಂದಾಜುಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದ 9 ಸಾವಿರ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಯನ್ನು ತಯಾರಿಸಿ, ಕೇಂದ್ರ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ.
ಭದ್ರಾ ಯೋಜನೆಯಿಂದ ನೀರನ್ನು ಎತ್ತಿ ಅಜ್ಜಂಪುರ ಸುರಂಗದವರೆಗೆ ನೀರು ಪೂರೈಸುವ ಕಾಮಗಾರಿ ಮತ್ತು ಅಜ್ಜಂಪುರ ಸುರಂಗ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ಚಾಲನೆಗೊಳಿಸಿ, ಪ್ರಥಮ ಬಾರಿಗೆ ವಾಣಿವಿಲಾಸ ಸಾಗರಕ್ಕೆ 3.48 ಟಿಎಂಸಿ ನೀರನ್ನು ಹರಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ತಾಲೂಕಿನ 58 ಕೆರೆಗಳು, ಮೊಳಕಾಲ್ಮೂರು ತಾಲೂಕಿನ 20 ಕೆರೆಗಳನ್ನು ತುಂಬಿಸಲು 705 ಪಾಯಿಂಟ್ 88 ಕೋಟಿ ಮೊತ್ತದ ಮೂರು ಪ್ಯಾಕೇಜ್ ಕಾಮಗಾರಿ ಮತ್ತು ಪಾವಗಡ ತಾಲೂಕಿನ 38 ಕೆರೆಗಳು ಮತ್ತು ಚಳ್ಳಕೆರೆ ತಾಲೂಕಿನ 21 ಕೆರೆಗಳನ್ನು ತುಂಬಿಸುವ 632.45 ಕೋಟಿ ಮೊತ್ತದ ಪ್ಯಾಕೇಜ್ ಕಾಮಗಾರಿ ಗುತ್ತಿಗೆ ಉಳಿಸಿ ಪ್ರಾರಂಭಿಸಲಾಗಿದೆ.
ಪ್ರಸಕ್ತ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆಗಳು ನಾಲಾ ಆಧುನಿಕರಣ ಕಾಮಗಾರಿಗಳು ಹಾಗೂ ಏತ ನೀರಾವರಿ ಕಾಮಗಾರಿಗಳು 7,379.92 ಕೋಟಿ ಮೊತ್ತದ 27 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಿಜಯನಗರ ನಾಲೆಗಳ ಆಧುನಿಕರಣ ಯೋಜನೆಗೆ 456.63 ಕೋಟಿಗೆ ಆಡಳಿತಾತ್ಮಕ ಅನುಮೋದನೆ ಮಲಪ್ರಭಾ ಯೋಜನೆ ಅಡಿ ನಾಲಾ ಜಾಲದ ಆಧುನಿಕರಣ ಕಾಮಗಾರಿ 1,000ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿ ಆರಂಭಿಸಲಾಗಿದೆ.
ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಒಟ್ಟು 172 ಕಿಲೋ ಮೀಟರ್ ಉದ್ದದ ನಾಲೆಗಳನ್ನು ಆಧುನಿಕರಣಗೊಳಿಸಲು 1,025 ಕೋಟಿ ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.