ಬೆಂಗಳೂರು: ನಾವೆಲ್ಲ ಕೊರೊನಾ ಮೊದಲ ಹೊಡೆತಕ್ಕೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದು, ಇದೀಗ ಮತ್ತೊಮ್ಮೆ ಗಡಿ ಕಾಯುವ ಯೋಧರಂತೆ ಮಹಾಮಾರಿಯನ್ನು ಬಡಿದೊಡಿಸಲು ಸೈನಿಕರಂತೆ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರಾದ ಸುದರ್ಶನ್ ಬಲ್ಲಾಳ್ ಸಲಹೆ ನೀಡಿದರು.
ಸಿಲಿಕಾನ್ ಸಿಟಿಯಲ್ಲಿ ಕ್ಲಸ್ಟರ್ಗಳು ಹೆಚ್ಚಾಗುತ್ತಿವೆ. ಕ್ಲಸ್ಟರ್ ಎಂದರೆ ಒಂದೇ ಪ್ರದೇಶದಲ್ಲಿ ಹೆಚ್ಚು ಸೋಂಕು ಪತ್ತೆಯಾಗುವುದು. ಈಗಾಗಲೇ ರಾಜ್ಯದಲ್ಲಿ 4 ಕ್ಲಸ್ಟರ್ಗಳು ಕಂಡು ಬಂದಿದೆ. ಮಂಗಳೂರಿನ ಉಳ್ಳಾಲದ ಆಲಿಯಾ ನರ್ಸಿಂಗ್ ಕಾಲೇಜು, ಬೆಂಗಳೂರಿನ ಕಾವಲ್ ಬೈರಸಂದ್ರ ಮಂಜುಶ್ರೀ ನರ್ಸಿಂಗ್ ಕಾಲೇಜು, ಬೊಮ್ಮನಹಳ್ಳಿ ಅಪಾರ್ಟ್ಮೆಂಟ್, ನಿನ್ನೆಯಷ್ಟೇ ಬೆಳ್ಳಂದೂರಿನ ಎಸ್ಜೆಆರ್ ಅಪಾರ್ಟ್ಮೆಂಟ್ನಲ್ಲಿ 500 ಮಂದಿ ಸ್ಯಾಂಪಲ್ನಲ್ಲಿ 10 ಮಂದಿಗೆ ಸೋಂಕು ದೃಢವಾಗಿದೆ. ಹೀಗಾಗಿ ಎರಡನೇ ಅಲೆ ಬರುವ ಮುನ್ಸೂಚನೆ ನೀಡುತ್ತಿರುವ ವೈದ್ಯರು ಆತಂಕಕ್ಕೆ ಒಳಗಾಗಿದ್ದು, ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಸುದರ್ಶನ್ ಬಲ್ಲಾಳ್ ಅವರು, ಕೋವಿಡ್ ನಮ್ಮನ್ನು ಬಿಟ್ಟು ಹೋಗಿಲ್ಲ, ಈಗಾಗಲೇ ಮೊದಲ ಅಲೆಗೆ ಸಾಕಷ್ಟು ಆರ್ಥಿಕ ಸಂಕಷ್ಟ ಅನುಭವಿಸಿದ್ದೇವೆ. ಸಾವು - ನೋವು ಕೂಡ ಆಗಿದ್ದು, ಇದೀಗ ಜನರು ಎಚ್ಚರಿಕೆಯಿಂದ ಇರಬೇಕು. ಕಳೆದ ಎರಡ್ಮೂರು ತಿಂಗಳಿನಿಂದ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಿತ್ತು. ಹಾಗೆ ವ್ಯಾಕ್ಸಿನೇಷನ್ ಡ್ರೈವ್ ಬಂದಿದ್ದು ಸಂತಸ ತಂದಿತ್ತು. ಅಂತೂ ಕೊರೊನಾದಿಂದ ಬೇಸತ್ತಿದ್ದ ನಮಗೆ ಇನ್ನೇನು ಎಲ್ಲ ಸರಿ ಆಯ್ತು ಎನ್ನುವಾಗಲೇ ಇದೀಗ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಓದಿ: ಗೊಂದಲದ ಗೂಡಾದ ಮೇಯರ್ ಚುನಾವಣೆ: ವಾಕ್ ಥ್ರೂ
ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನೆರೆಯ ರಾಜ್ಯವಾಗಿರುವ ನಮ್ಮ ಕರ್ನಾಟಕಕ್ಕೂ ಇದು ಕಂಟಕವಾಗಲಿದೆ. ಅದರಲ್ಲೂ ಎರಡ್ಮೂರು ವಾರದಿಂದ ಕ್ಲಸ್ಟರ್ ಹೆಚ್ಚಾಗಿದ್ದು, ಜನರು ಇನ್ನಷ್ಟು ಜಾಗರೂಕತೆಯಿಂದ ಇರಬೇಕು. ಇಲ್ಲವಾದರೆ ಕೊರೊನಾ ಎರಡನೇ ಅಲೆಗೆ ನಾವೇ ದಾರಿ ಮಾಡಿಕೊಟ್ಟಂತೆ ಎಂದು ಎಚ್ಚರಿಸಿದ್ದಾರೆ.