ಆನೇಕಲ್(ಬೆಂಗಳೂರು): ಹೈಕೋರ್ಟ್ ಆದೇಶದಂತೆ ಅತ್ತಿಬೆಲೆಯಲ್ಲಿ 21 ಪಟಾಕಿ ಮಳಿಗೆಗಳಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಭಾನುವಾರ ಬೆಳಗ್ಗೆಯಿಂದಲೇ ಜನರು ಪಟಾಕಿ ಖರೀದಿಸಲು ಮುಗಿಬಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು-ಹೊಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಬೇಕಾಯಿತು. ಇದರಿಂದ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, "ಪೊಲೀಸ್ ಅಧಿಕಾರಿಗಳು ಪಟಾಕಿ ಮಳಿಗೆಗಳ ಕೀ ಯನ್ನು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಬೇಕೆಂಬ ಉಚ್ಚ ನ್ಯಾಯಾಲಯದ ಆದೇಶದಂತೆ ನಾವು ಕೀ ಯನ್ನು ಹಸ್ತಾಂತರ ಮಾಡಿದ್ದೇವೆ. ಸುರಕ್ಷಿತ ಕ್ರಮಗಳನ್ನು ಮತ್ತು ನಿಯಮಾವಳಿಯಂತೆ ಪಟಾಕಿ ಮಾರಾಟ ಮಾಡಬೇಕೆಂದು ನಿರ್ದೇಶನ ಕೊಟ್ಟಿದೆ. ಜೊತೆಗೆ ತಹಶೀಲ್ದಾರ್ ಅವರು ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೇಳಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ್ ಅನ್ನು ನಿಯೋಜನೆ ಮಾಡಿದ್ದರು. ಟಾಸ್ಕ್ ಫೋರ್ಸ್ನಲ್ಲಿರುವ ಸದಸ್ಯರು ಎಲ್ಲಾ ಪಟಾಕಿ ಅಂಗಡಿಗಳಿಗೆ ಭೇಟಿ ನೀಡಿ ವರದಿಯನ್ನು ತಯಾರಿಸುತ್ತಿದ್ದಾರೆ. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ" ಎಂದರು.
"ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇವೆ. ಇಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಹೊಸೂರಿನಲ್ಲಿ ಪಟಾಕಿ ಮಳಿಗೆಗಳಿರುವುದರಿಂದ ಜನರು ಪಟಾಕಿ ಖರೀದಿಸಲು ಹೆಚ್ಚು ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಎರಡ್ಮೂರು ದಿನಗಳಿಂದ ಟ್ರಾಫಿಕ್ ಜಾಮ್ ಆಗಿತ್ತು. ಹಾಗಾಗಿ ಅಲ್ಲಿಗೆ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ, ನಾನು ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. ಈಗ ಹೆಚ್ಚು ಟ್ರಾಫಿಕ್ ಜಾಮ್ ಇಲ್ಲ" ಎಂದು ಹೇಳಿದರು.
ಕಣ್ಣಿನ ಚಿಕಿತ್ಸೆ ನೀಡಲು ಮಿಂಟೋ ಸಜ್ಜು: ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಪಟಾಕಿ ಅವಘಡಗಳಿಗೆ ಕಣ್ಣಿನ ಚಿಕಿತ್ಸೆ ನೀಡಲು 24 x 7 ಮಿಂಟೋ ನೇತ್ರಾಲಯ ಸಿದ್ಧವಾಗಿದೆ. ಹಬ್ಬದ ಸಮಯದಲ್ಲಿನ ಚಿಕಿತ್ಸೆಗೆ ಬೇಕಾದ ಔಷಧ ಮತ್ತು ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಎಲ್ಲಾ ರೀತಿಯ ತುರ್ತು ಚಿಕಿತ್ಸೆ ನೀಡುತ್ತಿದ್ದು, ವಿಶೇಷ ತಜ್ಞರು ಸೇರಿದ ಒಂದು ವೈದ್ಯ ತಂಡ ಸಮಯಾನುಸಾರ ಸೇವೆ ಒದಗಿಸಲು ಸಜ್ಜಾಗಿದೆ.
ಮುನ್ನೆಚ್ಚರಿಕೆ ತೆಗೆದುಕೊಳ್ಳಿ: ಪಟಾಕಿ ಸಿಡಿಸುವಾಗ ಉದ್ದನೆಯ ಕಡ್ಡಿ ಬಳಸಿ. ಪಟಾಕಿ ಬಾಕ್ಸ್ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ. ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು. ಪಕ್ಕದಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಸಿಂಥೆಟಿಕ್ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಿ ಪಟಾಕಿಗಳನ್ನು ಹಚ್ಚಬೇಡಿ. ಕಾಟನ್ ಬಟ್ಟೆ ಬಳಸಿ. ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬಾರದು.
ಇದನ್ನೂ ಓದಿ: 600 ಕೆಜಿಗೂ ಹೆಚ್ಚು ಪಟಾಕಿ ಸಂಗ್ರಹಿಸಿ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು: ಹೈಕೋರ್ಟ್