ಬೆಂಗಳೂರು: ಮಹದೇವಪುರ ಕ್ಷೇತ್ರದ ಗರುಡಾಚಾರ್ಯಪಾಳ್ಯ ವಾರ್ಡ್‌ನಲ್ಲಿ ನೂತನವಾಗಿ ಅಭಿವೃದ್ಧಿ ಪಡಿಸಿರುವ ಕೆರೆ, ಕಾವೇರಿ ನಗರದಲ್ಲಿನ ರಂಗಮಂದಿರ ಲೋಕಾರ್ಪಣೆ ಹಾಗೂ ವಾರ್ಡ್‌ನಲ್ಲಿ ಸುಮಾರು 5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅರವಿಂದ ಲಿಂಬಾವಳಿ ಹಾಗೂ ಪಾಲಿಕೆ ಸದಸ್ಯ ನಿತೀಶ್ ಪುರುಷೋತ್ತಮ ಚಾಲನೆ ನೀಡಿದರು.
ನಂತರ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಸರ್ಕಾರಿ ಜಮೀನುಗಳು ಹಾಗೂ ಕೆರೆ ಕುಂಟೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು. ಮಹದೇವಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರು ಕೆರೆಗಳ ಸಂರಕ್ಷಣೆಯಲ್ಲಿ ಕೈ ಜೋಡಿಸುವಂತೆ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
ಕೆರೆಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಕೆರೆಗಳ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕೆರೆಯ ಆವರಣದಲ್ಲಿ ವಾಸಿಸುತ್ತಿರುವವರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ನೀಡುವ ಕಾರ್ಯ ಮಾಡಲಾಗುವುದೆಂದು ಹೇಳಿದರು.
ಇನ್ನು ಗರುಡಾಚಾರಪಾಳ್ಯದ ಕೆರೆಯನ್ನು ಬಿಬಿಎಂಪಿ ಸದಸ್ಯ ನಿತೀಶ್ ಪುರುಷೋತ್ತಮ್ ನೇತೃತ್ವದಲ್ಲಿ ಉತ್ತಮವಾಗಿ ಅಭಿವೃದ್ಧಿ ಪಡಿಸಲಾಗಿದೆ. ಸಾರ್ವಜನಿಕರು ಕೆರೆಯ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.
ಪಾಲಿಕೆಯ ಸದಸ್ಯ ನಿತೀಶ್ ಪುರುಷೋತ್ತಮ ಮಾತನಾಡಿ, ಗರುಡಾಚಾರ್ಯಪಾಳ್ಯದಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿ 2.5 ಕೋಟಿ ವೆಚ್ಚದಲ್ಲಿ ವಾಯು ವಿಹಾರಿಗಳಿಗಾಗಿ ಪಾದಚಾರಿ ಮಾರ್ಗ ಉತ್ತಮ ಉದ್ಯಾನವನ ನಿರ್ಮಿಸಲಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.