ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಅನ್ನೋದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಬರೀ ದುಡ್ಡು ಖರ್ಚು ಮಾಡಿದರೆ ಗೆಲ್ಲಲು ಆಗಲ್ಲ ಅನ್ನೋದಕ್ಕೆ ಈ ಫಲಿತಾಂಶ ಸಾಕ್ಷಿ. ಬಿಜೆಪಿಯವರು ಬರೀ ದುಡ್ಡಿದೆ, ಅಧಿಕಾರ ಇದೆ, ಗೆದ್ದು ಬಿಡ್ತೀವಿ ಅಂತ ಹೋದವರು. ಆದರೆ ಸೋತಿದ್ದಾರೆ. ರಾಜ್ಯದಲ್ಲಿ ಗಾಳಿ ಕಾಂಗ್ರೆಸ್ ಪರವಾಗಿದೆ ಎಂದು ಅಭಿಪ್ರಾಯಪಟ್ಟರು.
1187ರಲ್ಲಿ 500ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿ 434, ಜೆಡಿಎಸ್ 45 ಗೆದ್ದಿದೆ. ಸುಮಾರು ನೂರಕ್ಕೂ ಹೆಚ್ಚು ಸ್ಥಾನ ಅತಂತ್ರ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸ್ತಿದೆ. ಬಿಜೆಪಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ, ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ ಎಂದರು.
ಕೆಲವು ದೇವಸ್ಥಾನಗಳು ಕಷ್ಟದಲ್ಲಿವೆ. ಅವೆಲ್ಲವನ್ನೂ ಬಿಟ್ಟರೆ ಅವುಗಳಿಗೆ ಕಷ್ಟವಾಗುತ್ತದೆ. ಕೆಲವು ದೇವಾಲಯಗಳು ಸರ್ಕಾರದಲ್ಲಿರಬೇಕು. ಕೆಲವು ಸ್ವತಂತ್ರ ಆಗಬೇಕು. ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡಲು ಬಿಜೆಪಿ ಯತ್ನಿಸುತ್ತೆ. ಆದರೆ ಜನ ಮರಳಾಗಲ್ಲ. ಜನ ಬುದ್ದಿವಂತರಿದ್ದಾರೆ. ಸರಿಯಾದ ತೀರ್ಮಾನ ಕೊಡ್ತಾರೆ ಎಂದು ಹೇಳಿದರು.