ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯು ಫಲಾನುಭವಿಗಳಿಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ನೀಡದೆ, ದಂಡ ವಿಧಿಸುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಸತಿ ಸಚಿವ ವಿ.ಸೋಮಣ್ಣಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಮೈಸೂರಿನ ಕೆ.ಆರ್.ಎಸ್. ನಿಸರ್ಗ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿಯು ನಿವೇಶನಗಳನ್ನು ಹಾಗೂ ಮನೆಗಳನ್ನು ನಿರ್ಮಿಸಿದೆ. ಅರ್ಜಿ ಕರೆದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿರುವ ಮೈಸೂರಿನ ಇಲವಾಲ ಕೆ.ಆರ್.ಎಸ್. ನಿಸರ್ಗ ಬಡಾವಣೆಯ ಫಲಾನುಭವಿಗಳಿಗೆ ಕರ್ನಾಟಕ ಗೃಹ ಮಂಡಳಿಯು ಮೈಸೂರು-ಇಲವಾಲ ವಸತಿ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಿ ಸದರಿ ಬಡಾವಣೆಯಲ್ಲಿ ಕುಡಿಯುವ ನೀರು, ವಿದ್ಯುತ್, ಬಸ್ ಡಿಪೊ ಪೊಲೀಸ್ ಸ್ಟೇಷನ್, ಆಸ್ಪತ್ರೆ, ಶಾಲಾ, ಕಾಲೇಜು ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದ್ದ ಭರವಸೆಯನ್ನು ಈವರೆಗೂ ನೆರವೇರಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.
2016-17 ರಲ್ಲಿ ನಿವೇಶನ ಹಾಗೂ ಮನೆಗಳನ್ನು ಪಡೆದವರೆಲ್ಲರೂ ಷರತ್ತುಬದ್ಧ ಕ್ರಯ ಪತ್ರವನ್ನು ನೋಂದಾಯಿಸಿಕೊಳ್ಳುವಂತೆ ಮಂಡಳಿಯು ತಿಳಿಸಿತ್ತು. ಅದರಂತೆ ಶುದ್ಧ ಕ್ರಯಪತ್ರ ಪಡೆದು 5 ವರ್ಷಗಳು ಕಳೆದಿವೆ. ಈಗ ಶುದ್ಧ ಕ್ರಯಪತ್ರ ಹಾಗೂ ಖಾತಾ ಪತ್ರಗಳನ್ನು ಪಡೆಯಲು ಫಲಾನುಭವಿಗಳು ದಂಡ ಶುಲ್ಕ ಸೇರಿ ಅಪಾರ ಪ್ರಮಾಣದ ದುಬಾರಿ ಶುಲ್ಕಗಳನ್ನು ಪಾವತಿಸಬೇಕಾಗಿದೆ. ಶುದ್ಧ ಕ್ರಯಪತ್ರ ಹಾಗೂ ಖಾತಾ ಪತ್ರಗಳಿಗಾಗಿ ದಂಡ ಶುಲ್ಕ ನಿರ್ವಹಣಾ ಶುಲ್ಕ 9 & l1 ನಮೂನೆ ಶುಲ್ಕ ಪಾವತಿಸುವುದನ್ನು ಕಡ್ಡಾಯ ಮಾಡಿ ಫಲಾನುಭವಿಗಳಿಗೆ ನೋಟಿಸ್ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಎಲ್ಲ ಶುಲ್ಕಗಳು ಸೇರಿ ಸುಮಾರು ರೂ.57,000/- ರಷ್ಟಾಗುತ್ತದೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ವಾಸೀಂ ಪಠಾಣ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಸದರಿ ಫಲಾನುಭವಿಗಳು ನಿವೇಶನ ಮತ್ತು ಮನೆಗಳಿಗಾಗಿ ಮಾಡಿಕೊಂಡಿರುವ ಸಾಲಗಳು ಇನ್ನೂ ಚಾಲ್ತಿಯಲ್ಲಿದ್ದು, ದಂಡ ಶುಲ್ಕವನ್ನು ಪಾವತಿಸುವ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಫಲಾನುಭವಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ನೋಟಿಸ್ ನೀಡಿರುವ ಗೃಹ ಮಂಡಳಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಫಲಾನುಭವಿಗಳಿಗೆ ನ್ಯಾಯ ದೊರಕಿಸುವುದು ಅವಶ್ಯವಾಗಿದೆ. ಗೃಹ ಮಂಡಳಿಯ ಭರವಸೆಯಂತೆ ಸದರಿ ಬಡಾವಣೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಫಲಾನುಭವಿಗಳಿಗೆ ವಿಧಿಸುತ್ತಿರುವ ದಂಡವನ್ನು ಮನ್ನಾ ಮಾಡುವುದು ಸೂಕ್ತವಾಗಿದೆ ಎಂದರು.
ನಿರ್ವಹಣಾ ಶುಲ್ಕ ಮತ್ತು ನಮೂನೆಗಳ ಶುಲ್ಕಗಳನ್ನು ಪಾವತಿಸಿಕೊಂಡು, ದಂಡ ಶುಲ್ಕವನ್ನು ಮನ್ನಾ ಮಾಡಿ. ಸದರಿ ಫಲಾನುಭವಿಗಳಿಗೆ ನೀಡಿರುವ ನೋಟಿಸ್ನನ್ನು ಹಿಂಪಡೆದು, ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸಿ. ಅರ್ಹ ಫಲಾನುಭವಿಗಳಿಗೆ ಶುದ್ಧ ಕ್ರಯ ಪತ್ರ ಹಾಗೂ ಖಾತಾ ಪತ್ರಗಳನ್ನು ಒದಗಿಸುವಂತೆ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.