ಬೆಂಗಳೂರು: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವ ವಿಚಾರಕ್ಕೆ ನಾವು ಬದ್ಧವಾಗಿದ್ದೇವೆ. ನಾಳೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಡಳಿತದ ಜೊತೆ ಸಭೆ ನಡೆಸಿ ಯಾವ ರೀತಿ ಸಮಸ್ಯೆ ಪರಿಹರಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪ್ರತಿಯೊಬ್ಬ ರಾಷ್ಟ್ರಭಕ್ತ ಯುವಕನಿಗೆ ಪ್ರೇರಣೆ ಕೊಡುವುದು ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿದ್ದ ರಾಯಣ್ಣ ತನ್ನ ಜೀವವನ್ನೇ ಅರ್ಪಣೆ ಮಾಡಿದ್ದಾನೆ. ರಾಣಿ ಚೆನ್ನಮ್ಮನನ್ನು ಅಮ್ಮ ಎಂದೇ ಕರೆಯುತ್ತಿದ್ದ ರಾಯಣ್ಣನನ್ನು ಚನ್ನಮ್ಮ ಮಗನೆಂದೇ ಕರೆಯುತ್ತಿದ್ದರು. ಇಲ್ಲಿ ಜಾತಿ ಪ್ರಶ್ನೆಯೇ ಬರಲಿಲ್ಲ ಎಂದಿದ್ದಾರೆ.
ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರು ಇಂದು ಇಡೀ ದೇಶದಲ್ಲಿ ಮೊಘಲರನ್ನು ಓಡಿಸುವ ದೃಷ್ಟಿಯಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಯಶಸ್ವಿಯಾದ ಹೋರಾಟಗಾರ. ಅಹಲ್ಯಾಬಾಯಿ ಹೋಳ್ಕರ್ ಈ ದೇಶದ ಸೋಮನಾಥ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ ಧ್ವಂಸವಾದಾಗ ತಾವೇ ನಿಂತು ದೇವಸ್ಥಾನಗಳನ್ನು ಕಟ್ಟಿ ಕೊಟ್ಟಂತಹ ಧರ್ಮದ ಪ್ರೇರಣೆ ಕೊಡುವ ವ್ಯಕ್ತಿಯಾದರು. ಇವರಿಗೆ ಜಾತಿ, ಧರ್ಮ, ಪ್ರಾಂತ್ಯದ ಪ್ರಶ್ನೆ ಬರಲಿಲ್ಲ. ಹಾಗಾಗಿ ಮರಾಠಿಗರು, ಕನ್ನಡಿಗರು ಎನ್ನುವ ಪ್ರಶ್ನೆ ತರಬಾರದು. ಶಿವಾಜಿ, ರಾಯಣ್ಣ ಯಾವ ಜಾತಿ ಯಾವ ಧರ್ಮ ಎನ್ನುವ ಪ್ರಶ್ನೆ ಇರಬಾರದು. ಜಾತಿ, ಪ್ರಾಂತ್ಯ, ಭಾಷೆ ಇದೆಲ್ಲದಕ್ಕೂ ಉತ್ತರ ದೇಶಭಕ್ತಿ ಮಾತ್ರ. ಶಿವಾಜಿ ಹಾಗು ರಾಯಣ್ಣ ಇಬ್ಬರ ರಾಷ್ಟ್ರಭಕ್ತಿಯನ್ನು ಯಾರು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ಕೆಲವರ ಸಂಕುಚಿತ ಭಾವನೆಯಿಂದ ಈ ರೀತಿ ಸಣ್ಣಪುಟ್ಟ ಸಂಘರ್ಷ ಆಗುತ್ತಿವೆ ಎಂದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಪೀರನವಾಡಿಯಲ್ಲಿ ಆಗುವುದರಲ್ಲಿ ಯಾವುದೇ ಗೊಂದಲವಿಲ್ಲ. ನಾಳೆ ಬೆಳಗ್ಗೆ ಅಲ್ಲಿಗೆ ಹೋಗಿ ಅಲ್ಲಿರುವ ಸಮಸ್ಯೆಯನ್ನು ಪರಿಶೀಲನೆ ಮಾಡಿ ಪರಿಹರಿಸುವ ಕೆಲಸ ಮಾಡಲಾಗುತ್ತದೆ. ಈಗಾಗಲೇ ಯಡಿಯೂರಪ್ಪನವರು ಕೂಡ ಈ ಬಗ್ಗೆ ಹೇಳಿದ್ದಾರೆ. ಪ್ರತಿಮೆ ನಿರ್ಮಿಸುತ್ತೇವೆ ಅಲ್ಲಿಯೇ ಇಡುತ್ತೇವೆ ಎಂದು ಹೇಳಿದ್ದಾರೆ. ಕಾಗಿನೆಲೆ ಶ್ರೀಗಳಿಗೂ ಹೇಳಿ ಕಳುಹಿಸಿದ್ದಾರೆ, ಸಿದ್ದರಾಮಯ್ಯ ಸೇರಿ ಎಲ್ಲರ ಅಪೇಕ್ಷೆಯೂ ಇದೆ ಆಗಿದೆ. ನಾಳೆ ಬೆಳಗಾವಿಗೆ ಹೋಗುತ್ತೇನೆ ಅಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸುತ್ತೇನೆ. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದಿದ್ದಾರೆ.