ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ 40 ಪರ್ಸೆಂಟ್ ಕಮಿಷನ್, ಪೇಸಿಎಂ ವಿಷಯ ಸದ್ದು ಮಾಡಿತು. ಪ್ರತಿಪಕ್ಷಗಳ ಗದ್ದಲ, ಬಿಜೆಪಿಯ ಭಿತ್ತಿಪತ್ರ ಪ್ರದರ್ಶನಕ್ಕೆ ಸದನ ವೇದಿಕೆಯಾಯಿತು. ಗದ್ದಲದಲ್ಲೇ ಕಲಾಪ ನಡೆಸಿ ವಿಶ್ವವಿದ್ಯಾಲಯ ಬಿಲ್ ಪಾಸ್ ಮಾಡಿದ್ದಕ್ಕೆ ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿ ಮೇಜು ಕುಟ್ಟಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.
ಪೇಸಿಎಂ ಪ್ರಕರಣದಲ್ಲಿ ಕಾಂಗ್ರೆಸ್ ಸದಸ್ಯರ ಬಂಧನದ ಕುರಿತು ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಧರಣಿಯಿಂದ ಮುಂದೂಡಿಕೆಯಾಗಿದ್ದ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಜೆಡಿಎಸ್ ಸದಸ್ಯ ಬೋಜೇಗೌಡ, ಸಾಮಾಜಿಕ ಜಾಲತಾಣದ ವೈರಲ್ ವಿಷಯ ಮತ್ತು ಬಿಜೆಪಿ ಎದುರೇಟು ಎನ್ನುವ ಕುರಿತು ಕ್ಯೂಆರ್ ಕೋಡ್ ವಿಚಾರ ಚರ್ಚೆಗೆ ಬಂದಿದೆ. ಇದು ಕಿಡಿಗೇಡಿಗಳ ಕೃತ್ಯ, ನನ್ನ ಹೆಸರಲ್ಲಿ ಕ್ಯೂಆರ್ ಕೋಡ್ ಮಾಡಿದರೆ ನಾವು ಪ್ರಶ್ನೆ ಮಾಡಬಾರದಾ?, ಇಂತಹ ಕಿಡಿಗೇಡಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇದು ನಮ್ಮ ನೆಲದ ಕಾನೂನು, ಯಾವುದೇ ಅಧಿಕಾರಿ ಇರಲಿ, ಯಾರು ದೂರು ಕೊಡಲಿ, ಬಿಡಲಿ ಸ್ವಯಂ ದೂರು ದಾಖಲಿಸಿ ತನಿಖೆ ಮಾಡಲಿ ಎಂದರು.
ಇದನ್ನೂ ಓದಿ: ಪ್ರಶ್ನೆಗೆ ಉತ್ತರಿಸಲು ಕಾಲಾವಕಾಶ ಕೋರಿದ ಸರ್ಕಾರ, ಕಾಂಗ್ರೆಸ್ ಆಕ್ಷೇಪ: ಕಲಾಪ ಮುಂದೂಡಿಕೆ
ಪೇಸಿಎಂ ಹೆಸರಿನಲ್ಲಿ ಕ್ಯೂಆರ್ ಕೋಡ್ ಮಾಡಿದ್ದಾರೆ, ಸಿದ್ದರಾಮಯ್ಯ, ಡಿಕೆಶಿ ಫೋಟೋದಲ್ಲೂ ಪೇಸಿಎಂ ಎಂದು ಪೋಸ್ಟರ್ ಮಾಡಿದ್ದಾರೆ. ಸಿಎಂಗೆ ವಿನಾಕಾರಣ ತೊಂದರೆ ಕೊಡುವ ಕೃತ್ಯವೆಸಗಿದ್ದಾರೆ. ಇದಕ್ಕೆ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕ್ಯೂಆರ್ ಕೋಡ್ ಮಾಡಿದವರನ್ನೂ ಸಹ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಬೋಜೇಗೌಡರ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ, ಪೇಸಿಎಂ ಹೆಸರಿನಲ್ಲಿ ಇಂತಹ ಕೃತ್ಯ ಸರಿಯಲ್ಲ, ಸಿದ್ದರಾಮಯ್ಯ ಮತ್ತು ಡಿಕೆಶಿಯದ್ದು ಕ್ಯೂಆರ್ ಕೋಡ್ ಮಾಡಲಾಗಿದೆ. ಅದರ ವಿರುದ್ಧ ಯಾಕೆ ಕ್ರಮ ಇಲ್ಲ ಎಂದಿದ್ದಾರೆ. ನೀವು ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮಾಣಿಪ್ಪಾಡಿ ವರದಿ ಮಂಡನೆಗೆ ಆಗ್ರಹ, ಆಡಳಿತ ಸದಸ್ಯರಿಂದಲೇ ಸದನದಲ್ಲಿ ಗದ್ದಲ: ಇಕ್ಕಟ್ಟಿಗೆ ಸಿಲುಕಿದ ಸರ್ಕಾರ
ಗೌರವ ಉಳಿದರೆ ಎಲ್ಲರದ್ದೂ ಉಳಿಯಲಿದೆ. ಹೋದರೆ ಎಲ್ಲರದ್ದೂ ಹೋಗಲಿದೆ. ಹೀಗಾದರೆ ಸಾರ್ವಜನಿಕ ಜೀವನದಲ್ಲಿರಲು ಸಾಧ್ಯವಿಲ್ಲ, ನಾವೆಲ್ಲರೂ ಇಲ್ಲಿ ಒಂದೇ, ಸಿಎಂ ಅವರನ್ನೇ ಹೀಗೆ ಮಾಡಿದರೆ ಹೇಗೆ, ಚಾರಿತ್ರ್ಯವಧೆ ನೋಡಿಕೊಂಡು ಕೂರಬೇಕಾ?, ನಿಮ್ಮ ಕಡೆಯವರ ಬಗ್ಗೆ ಕ್ರಮ ಇಲ್ಲ ಎಂದರೆ ದೂರು ಕೊಡಿ, ಕ್ರಮ ಕೈಗೊಳ್ಳೋಣ ಎಂದರು.
ಸಾರ್ವಜನಿಕವಾಗಿ ಈ ರೀತಿ ಮಾಡಿದರೆ ಹೇಗೆ?, ನಾಳೆ ಹರಿಪ್ರಸಾದ್ಗೆ ಹೀಗೆ ಮಾಡಿದರೂ ಕ್ರಮ ಕೈಗೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದರು. ನಾವು ನೀವು ಜಗಳ ಆಡುವುದು ಬೇರೆ, ಸಾರ್ವಜನಿಕವಾಗಿ ನಗ್ನವಾಗಬೇಕಾ?. ನಮ್ಮ ಗೌರವವನ್ನು ಇನ್ನಷ್ಟು ಕೆಳಕ್ಕೆಳೆಯುವುದು ಬೇಡ. ಕಾಂಗ್ರೆಸ್ ಇದನ್ನೆಲ್ಲಾ ಮಾಡಿಸುತ್ತಿದೆ ಎಂದು ನಾವು ಹೇಳಲ್ಲ. ಆದರೆ, ಅವರ ಬೆಂಬಲಕ್ಕೆ ನಿಲ್ಲಬೇಡಿ. ಪೇಸಿಎಂ ಆರೋಪಕ್ಕೆ 5 ದೂರುಗಳು ದಾಖಲಾಗಿವೆ. ನಿಮ್ಮ ಕಡೆಯದ್ದೂ ದೂರು ಕೊಡಿ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಹಿಂದೆ ನಮ್ಮ ಸರ್ಕಾರದ ವೇಳೆ ನಿದ್ದರಾಮಯ್ಯ ಎಂದಾಗ ನಿಮ್ಮನ್ನು ಬಂಧಿಸಿದ್ದೇವಾ?, 10 ಪರ್ಸೆಂಟ್ ಎಂದಾಗ ವಿಶ್ವಗುರುವನ್ನು ಬಂಧಿಸಿದ್ದರಾ?, ಬಿ.ಟಿ ಲಲಿತಾ ನಾಯಕ್ ಅವರಿಗೆ 9 ಕೊಲೆ ಪತ್ರ ಬಂದಿರುವ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ಹರಿಪ್ರಸಾದ್ ಕೊಲ್ಲುತ್ತೇವೆ ಎಂದು ಮೂರು ಪತ್ರದಲ್ಲಿದ್ದರೂ ಏನು ಕ್ರಮ ಕೈಗೊಂಡಿದ್ದೀರಾ, ಈಗ ಈ ವಿಚಾರದಲ್ಲಿ ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದೀರಾ?, ಹಿಂದೆಲ್ಲಾ ಏನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ನಮ್ಮ ಸಾಮಾಜಿಕ ಜಾಲತಾಣದವರೇನು ಉಗ್ರರಾ?, ರಾತ್ರೋರಾತ್ರಿ ಮನೆಯವರನ್ನು ಹೆದರಿಸಿ ಬಂಧಿಸಿದ್ದೀರಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 40% ಬರಹವುಳ್ಳ ಮಾಸ್ಕ್ ಧರಿಸಿ ಬಂದ ಕಾಂಗ್ರೆಸ್ ಸದಸ್ಯರು: ಪರಿಷತ್ನಲ್ಲಿ ಗದ್ದಲ
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚರ್ಚೆ ಮಾಡುವುದಿದ್ದರೆ ನೋಟಿಸ್ ಕೊಡಲಿ, ಪ್ರಶ್ನೋತ್ತರ ನಿಲ್ಲಿಸಿ ಚರ್ಚೆಗೆ ಅವಕಾಶ ಬೇಡ ಎಂದರು. ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್, 40 ಪರ್ಸೆಂಟ್ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಸಿದ್ದ ಎಂದು ಸಿಎಂ ಹೇಳಿದ್ದಾರೆ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿಎಂ, ಇಂದು ನಾಳೆ ಸದನ ಇದೆ 40, 100 ಪರ್ಸೆಂಟ್ ಎಲ್ಲಾ ಚರ್ಚೆಗೆ ಸಿದ್ಧವಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಳಿಕ ಮಾತನಾಡಿದ ಹರಿಪ್ರಸಾದ್, ಮೂರಲ್ಲ ಹತ್ತು ತಲೆಮಾರು ಚರ್ಚೆ ಆಗಲಿ. ಅಮಾಯಕರನ್ನು ರಾತ್ರಿ 2 ಗಂಟೆಗೆ ಬಂಧಿಸಿದ್ದಾರೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಯಾರು ಅಮಾಯಕರು ಎಂದು ಟಾಂಗ್ ನೀಡಿದರೆ, ನೀವು ನ್ಯಾಯಾಧೀಶರಾ? ಎಂದು ಹರಿಪ್ರಸಾದ್ ಅವರನ್ನು ಪ್ರಶ್ನಿಸಿದರು.
ಸದನದಲ್ಲಿ ಗದ್ದಲದ ನಡುವೆಯೂ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ಮಾಸ್ಕ್ಗೆ ಪ್ರತಿಯಾಗಿ ಭಿತ್ತಿ ಪತ್ರ ಪ್ರದರ್ಶನ ಮಾಡಿದ ಬಿಜೆಪಿ ಸದಸ್ಯರು, ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಹಗರಣ, ಕೆಪಿಎಸ್ಸಿ ಹಗರಣ, ಬಿಟ್ ಕಾಯಿನ್ ಹಗರಣದ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಕಾಂಗ್ರೆಸ್ ಸದಸ್ಯರ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರೂ ಭಿತ್ತಿಪತ್ರ ಪ್ರದರ್ಶಿಸಿದರು.
ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಪ್ರಶ್ನೋತ್ತರ, ಲಿಖಿತ ಮೂಲಕ ಉತ್ತರ, ಶೂನ್ಯವೇಳೆ ಮುಗಿಸಿದ ಸಭಾಪತಿಗಳು, ಶಾಸನ ರಚನೆ ಕಲಾಪ ಕೈಗೆತ್ತಿಕೊಂಡರು.
ಇದನ್ನೂ ಓದಿ: ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ, ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ
ಕರ್ನಾಟಕ ವಿಶ್ವ ವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಮಂಡಿಸಿದ ಮಾಧುಸ್ವಾಮಿ ಅಂಗೀಕಾರಕ್ಕೆ ಮನವಿ ಮಾಡಿದರು. ಕಾಂಗ್ರೆಸ್ ಗದ್ದಲದ ನಡುವೆ ಯಾವುದೇ ಚರ್ಚೆ ಇಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಿದರು. ಈ ವೇಳೆ ಗದ್ದಲದಲ್ಲಿ ವಿಧೇಯಕ ಅಂಗೀಕಾರಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭಾಪತಿ ಪೀಠದ ಬಳಿ ಬಂದು ಪೀಠ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಾರ್ಷಲ್ಗಳು ಸಭಾಪತಿಗಳ ಪೀಠ ಸುತ್ತುವರಿದು ರಕ್ಷಣೆ ನೀಡಿದರು. ನಂತರ ಕಲಾಪವನ್ನು ಸಭಾಪತಿ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿದರು.
ಕಲಾಪ ಮುಂದೂಡಿಕೆ ಆದರೂ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು. ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಚರ್ಚೆ ಇಲ್ಲದೆ ಬಿಲ್ ಅಂಗೀಕರಿಸಿದ್ದನ್ನು ಖಂಡಿಸಿ ಜೆಡಿಎಸ್ನ ಮರಿತಿಬ್ಬೇಗೌಡ ಮತ್ತು ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಕುರ್ಚಿ ಮೇಲೆ ನಿಂತು ಆಕ್ರೋಶ ಹೊರಹಾಕಿದರು. ಬಳಿಕ ಮಾರ್ಷಲ್ಗಳ ದಂಡನಾಯಕರು ಮಾರ್ಷಲ್ಗಳಿಗೆ ನಿರ್ದೇಶನ ನೀಡಿದರು. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರನ್ನು ಹೊರಗೆ ಕಳಿಸಲಾಯಿತು.