ಆನೇಕಲ್: ಹೆಚ್ಚುತ್ತಿರುವ ಕೆಲಸದ ಒತ್ತಡ, ಬೆಲೆ ಏರಿಕೆಗಳಿಗೆ ತತ್ತರಿಸಿರುವ ಕಾರ್ಮಿಕ ವರ್ಗ ಕೆಲವೊಮ್ಮೆ ಸಿಕ್ಕಿದ ವಾಹನ ಏರಿ ಸಮಯಕ್ಕೆ ಸರಿಯಾಗಿ ಕಾರ್ಖಾನೆ ತಲುಪಲು ಹವಣಿಸುತ್ತಿದೆ. ಆದರೆ ಇತ್ತೀಚೆಗೆ ಹೈಕೋರ್ಟಿನಲ್ಲಿ ಹೊರಡಿಸಲಾದ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ ಅಪರಾಧ ಎಂಬ ತೀರ್ಪಿನ ನಂತರ ಅದು ಕಾರ್ಮಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತಾಲೂಕಿನ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ, ಪೊಲೀಸ್, ಕಾರ್ಮಿಕ ಮತ್ತು ಶಿಕ್ಷಣ ಇಲಾಖೆಗಳ ಜಂಟಿ ಆಯೋಜನೆಯಲ್ಲಿ ಮರಸೂರು ಆದಿತ್ಯ ಬಿರ್ಲಾ ಖಾಸಗಿ ಕಾರ್ಖಾನೆಯ ಕಾರ್ಮಿಕರಿಗೆ, ಜೀವ ಕೈಯಲ್ಲಿ ಹಿಡಿದು ಸರಕು ವಾಹನಗಳಲ್ಲಿ ಹೋಗುವುದಕ್ಕಿಂತ ಕುಟುಂಬ ವರ್ಗವನ್ನು ನೆನೆದು ಪ್ರಯಾಣಿಕರ ವಾಹನದಲ್ಲೇ ಹೋಗುವಂತೆ ಅನೇಕಲ್ ನ್ಯಾಯಪೀಠ ಕಾರ್ಮಿಕರಿಗೆ ಕಿವಿಮಾತು ಹೇಳುವ ಜೊತೆಗೆ ಕಾನೂನು ಪಾಠವನ್ನು ತಿಳಿಸಿಕೊಡುವ ಅರಿವಿನ ಜಾಗೃತಿ ನಡೆಸಿತ್ತು.
ಆದಿತ್ಯ ಗಾರ್ಮೆಂಟ್ಸ್ವರೆಗೆ ಕಾಲ್ನಡಿಗೆ ಜಾಥಾ ಮೂಲಕ ಬಂದು ಕಾರ್ಖಾನೆಯ ಸಭಾಂಗಣದಲ್ಲಿ ಸಮಾವೇಶಗೊಂಡು, ಪ್ರತಿ ಕಾರ್ಮಿಕನ ಜೀವದ ಬಗ್ಗೆ ಗೌರವವಿದೆ. ಹಾಗಂತ ಯಾವುದೋ ವಾಹನ ಏರಿ ಬರುವುದು ಅಪರಾಧವಾಗತ್ತೆ. ಒಂದು ವೇಳೆ ಅಪಘಾತವಾದ್ರೆ ವಿಮಾ ಇಲಾಖೆ ಹಾಗೂ ಕಾನೂನಿನ ನೆರವು ದೊರೆಯುವುದಿಲ್ಲ. ಹೀಗಾಗಿ ಯಾರೂ ಸರಕು ಸಾಗಣೆ ವಾಹನದಲ್ಲಿ ಸಂಚರಿಸಬಾರದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಗೋಕುಲ್ ಕಾರ್ಮಿಕರಿಗೆ ಕರೆ ನೀಡಿದರು.