ಬೆಂಗಳೂರು: ''ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಹಾಗೂ ಸಿದ್ಧಾಂತ ಮುಖ್ಯವಾಗಿದೆ. ಹೈಕಮಾಂಡ್ ನಿರ್ಧಾರವನ್ನು ನಾವು ಸ್ವಾಗತಿಸುತ್ತಿದ್ದು, ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ವಿಶ್ವಾಸ ಇದೆ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ'' ಎಂದು ಮಾಜಿ ಡಿಸಿಎಂ ಆರ್. ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ವಿಜಯೇಂದ್ರ ಅವರಿಗೆ ಶುಭ ಕೋರಿ ಮಾತನಾಡಿದ ಅವರು, ''ಅಳೆದು ತೂಗಿ ವಿಜಯೇಂದ್ರಗೆ ನಾಯಕತ್ವ ಕೊಟ್ಟಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಅವರು ಪಕ್ಷದ ಚಟುವಟಿಕೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ಭಾಗಿಯಾಗಲಿದ್ದಾರೆ. ಹೈಕಮಾಂಡ್ನ ಘೋಷಣೆಯನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ'' ಎಂದರು.
''ಹಳೆ ಚಿಗುರು ಹೊಸಬೇರು ಕೂಡಿರಲು ಮರ ಸೊಬಗು ಎನ್ನುವಂತಹ ಹೊಸತನ ಬರಬೇಕು. ಹಳಬರನ್ನೂ ಒಟ್ಟಿಗೆ ತೆಗೆದುಕೊಂಡ ಹೋಗಬೇಕು ಎಂದು ಈ ನೇಮಕ ಆಗಿದೆ. ವಿಜಯೇಂದ್ರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ವಿಶ್ವಾಸದಿಂದ ಹೋಗಲಿದ್ದಾರೆ. ನಮಗೆ ಪಕ್ಷ, ಸಿದ್ಧಾಂತ ಮುಖ್ಯ, ವ್ಯಕ್ತಿ ಅಲ್ಲ. ಇದರಿಂದ ವಿಜಯೇಂದ್ರ ಆಯ್ಕೆಯನ್ನು ಒಪ್ಪಿ ಅಗತ್ಯ ಸಹಕಾರ ನೀಡಲಿದ್ದೇವೆ'' ಎಂದು ತಿಳಿಸಿದರು.
''ಪ್ರತಿಪಕ್ಷ ನಾಯಕನ ಆಯ್ಕೆಯೂ ಶುಕ್ರವಾರ ಆಗಲಿದೆ. ಯಾವ ಸಮುದಾಯ ಅನ್ನುವುದಕ್ಕಿಂತ ಬಿಜೆಪಿಯವರೇ ಆಯ್ಕೆಯಾಗಲಿದ್ದಾರೆ. ಇದರಲ್ಲಿ ಸಮುದಾಯ ಮುಖ್ಯ ಅಲ್ಲ, ಜಾತಿಗಿಂತ ಸದನದಲ್ಲಿ ಆಡಳಿತ ಪಕ್ಷ ಎದುರಿಸಲು ಸಮರ್ಥ ವ್ಯಕ್ತಿ ಆಯ್ಕೆಯಾಗಲಿದೆ. ಗುಟ್ಟುಬಿಟ್ಟು ಕೊಡದೆ ಹೈಕಮಾಂಡ್ ಆಯ್ಕೆ ಮಾಡಿದ್ದು, ಅದನ್ನೂ ನಾವು ಸ್ವಾಗತಿಸುತ್ತೇವೆ'' ಎಂದರು.
ರೇಣುಕಾಚಾರ್ಯ ಪ್ರತಿಕ್ರಿಯೆ: ಮಾಜಿ ಶಾಸಕ ರೇಣುಕಾಚಾರ್ಯ ಮಾತನಾಡಿ, ''ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎನ್ನುವುದು ರೇಣುಕಾಚಾರ್ಯ ಕೂಗಲ್ಲ, ಈ ನಾಡಿನ ಪ್ರಜ್ಞಾವಂತರ ಅಪೇಕ್ಷೆಯಾಗಿತ್ತು. ಇದರಿಂದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಅಭಿನಂದನೆಗಳು. ವಿಜಯೇಂದ್ರ ಸಂಘಟನಾ ಸಾಮರ್ಥ್ಯ ನೋಡಿ ಈ ಹುದ್ದೆ ಸಿಕ್ಕಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.
''ಯಡಿಯುರಪ್ಪ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ ಹೊರಟಿದ್ದೆ, ಕಾರ್ಯಕರ್ತರು ಪಕ್ಷದ ಮುಖಂಡರು ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವ ಮೂಲಕ ಆಚರಣೆ ಮಾಡ್ತಿದ್ದಾರೆ. ಸಂಘಟನೆ ಚತುರತೆ ಗಮನಿಸಿ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆ ಬರ್ತಿದೆ. ವಿಜಯೋತ್ಸವ ಆಚರಣೆ ಮಾಡುವಂತೆ ಮನವಿ ಮಾಡುತ್ತೇವೆ. ಯಡಿಯೂರಪ್ಪ ಒಂದು ಗುಂಪಿನ ನಾಯಕರಲ್ಲ, ಸಂಘ ಪರಿವಾರ ಅವರ ಹಿಂದಿದೆ. ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ. ಇನ್ನು ಸಂಘರ್ಷ ಇಲ್ಲಾ ಸಾಮರಸ್ಯದಿಂದ ಒಂದಾಗಿ ಪಕ್ಷ ಸಂಘಟನೆ ಮಾಡಬೇಕು. ಯಡಿಯೂರಪ್ಪ ರಾಜ್ಯದ್ಯಂತ ಪ್ರವಾಸ ಮಾಡ್ತಾರೆ. ನಾನು ವಯಸ್ಸಿನಲ್ಲಿ ಹಿರಿಯ. ಆದರೆ, ವಿಜಯೇಂದ್ರ ಅವರಿಗೆ ನಾಯಕತ್ವದ ಅನುಭವವಿದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಮುಂದಿನ ಶುಕ್ರವಾರ ಶಾಸಕಾಂಗ ಸಭೆ ಕರೆದು ಪ್ರತಿಪಕ್ಷ ನಾಯಕನ ಆಯ್ಕೆ: ರಾಜ್ಯಾಧ್ಯಕ್ಷ ವಿಜಯೇಂದ್ರ