ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ, ನವರಾತ್ರಿ ಮೊದಲ ದಿನವಾದ ಇಂದು ರಾಜರಾಜೇಶ್ವರಿ ನಗರದ ಪಾರ್ಕ್ನಲ್ಲಿ ಕುಂದಾಪುರಿಯನ್ಸ್ ತಂಡದ 150ಕ್ಕೂ ಹೆಚ್ಚು ಸದಸ್ಯರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು.
ವಾರ್ಡ್ ನಂ.160ರ ದ್ವಾರಕನಗರದ ಪಾರ್ಕ್ನಲ್ಲಿ ಬೆಳೆದಿದ್ದ ಅನಗತ್ಯ ಹೆಚ್ಚುವರಿ ಗಿಡಗಳನ್ನು ಕತ್ತರಿಸಿ, ಪ್ಲಾಸ್ಟಿಕ್ ಹೆಕ್ಕಿ ತೆಗೆದು ಪಾರ್ಕ್ ಅನ್ನು ಕುಂದಾಪುರದ ಹುಡುಗರು ಸ್ವಚ್ಛಗೊಳಿಸಿದರು. ಈ ಕಾರ್ಯಕ್ರಮಕ್ಕೆ ರಾಜರಾಜೇಶ್ವರಿ ನಗರದ ಕಾರ್ಪೊರೇಟರ್ ಮಂಜುಳ ಹಾಗೂ ಮಾಜಿ ಕಾರ್ಪೊರೇಟರ್ ರಾಮಚಂದ್ರಪ್ಪ, ನಟಿ ಅಮೂಲ್ಯ ಅವರ ಪತಿ ಜಗದೀಶ್ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಲ್ಲದೇ, ಕುಂದಾಪುರದ ಹುಡುಗರು ಅಲ್ಲಿಂದ ಬಂದು ಈಗ ಬೆಂಗಳೂರಿನಲ್ಲಿ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ಈ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಕೈಜೋಡಿಸಿ ಪಾರ್ಕ್ಅನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಜೊತೆಗೆ ಬಿಬಿಎಂಪಿ ಕಡೆಯಿಂದ ಈ ಪಾರ್ಕ್ನಲ್ಲಿ ಹೂ ಗಿಡಗಳ ಬೆಳೆಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಕಾರ್ಪೊರೇಟರ್ ಮಂಜುಳ ಹೇಳಿದ್ರು.
ಕುಂದಾಪುರಿಯನ್ಸ್ ತಂಡದ ಸದಸ್ಯ ದಿನೇಶ್ ಮಾತನಾಡಿ, ಸ್ವಚ್ಛತೆ ಕಡೆ ಒಂದು ನಡೆ ಎಂಬ ಧ್ಯೇಯದೊಂದಿಗೆ ಕುಂದಾಪುರಿಯನ್ಸ್ ತಂಡ ಪಾರ್ಕ್ ಸ್ವಚ್ಛತೆಗೆ ಮುಂದಾಗಿದ್ದೇವೆ. ಕುಂದಾಪುರದಿಂದ ಬಂದು ಇಲ್ಲಿ ನಾವು ಜೀವನ ರೂಪಿಸಿಕೊಂಡಿದ್ದೇವೆ. ಭೂಮಿಗೆ ಏನಾದರು ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಿದ್ದೇವೆಂದು ತಿಳಿಸಿದರು.