ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲಿನ ದಾಳಿ ಖಂಡಿಸಿ ಸಿಬಿಐ, ಐಟಿ, ಇಡಿಯನ್ನು ಕೇಂದ್ರ ಸರ್ಕಾರದ ಕೈಗೊಂಬೆ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಪರೇಶ್ ಮೇಸ್ತ ತನಿಖೆ ವಿಚಾರದಲ್ಲಿ ಸಿಬಿಐ ಪರವಾಗಿ ಮಾತನಾಡುತ್ತಿರುವುದು ಇವರ ಅನುಕೂಲಸಿಂಧು ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐ ಮತ್ತು ಇಡಿ ಬಗ್ಗೆ ಬೆಳಗ್ಗೆ ರಾತ್ರಿ ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು, ರಾತ್ರೋರಾತ್ರಿ ಇದೀಗ ಸಿಬಿಐ ಪರವಾಗಿ ಮಾತನಾಡುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ. ಇದು ಅವರ ಅನುಕೂಲಸಿಂಧು ರಾಜಕಾರಣಕ್ಕೆ ಉದಾಹರಣೆ. ಅವರ ಮೇಲೆ ಸಿಬಿಐ ದಾಳಿ ಮಾಡಿದರೆ ಸಿಬಿಐ ಸರಿ ಇಲ್ಲ ಅಂತಾರೆ. ಇಡಿ, ಐಟಿ ದಾಳಿ ವಿಚಾರವಾಗಿ ತನಿಖೆ ಮಾಡಿದರೆ ಕೇಂದ್ರ ಸರ್ಕಾರದ ಕೈಗೊಂಬೆ ಅಂತ ಹೇಳ್ತಾರೆ. ಈಗ ಪರೇಶ್ ಮೇಸ್ತ ಸಾವು ಕೊಲೆಯಲ್ಲ ಎಂದು ಸಿಬಿಐ ವರದಿ ಬಂದಿದೆ, ಇದನ್ನು ಮಾತ್ರ ಕರೆಕ್ಟ್ ಅಂತಿದ್ದಾರೆ ಎಂದರು.
(ಓದಿ: ನಾವು ಪರೇಶ್ ಮೇಸ್ತ ಕುಟುಂಬದ ಪರ ನಿಲ್ಲುತ್ತೇವೆ: ಸಿ ಟಿ ರವಿ)
ರಾಜ್ಯದ ಜನ ದಡ್ಡರಲ್ಲ, ಎಲ್ಲರೂ ರಾಹುಲ್ ಗಾಂಧಿ ಅಲ್ಲ. ಪರೇಶ್ ಮೇಸ್ತ ಕೇಸ್, ಶರತ್ ಮಡಿವಾಳ ಕೇಸ್ ಎಲ್ಲವೂ ನಡೆದಿರೋದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಎಫ್‌ಐಆರ್ ಹಾಕುವುದರಿಂದ ಹಿಡಿದು, ಪೋಸ್ಟ್ ಮಾರ್ಟಮ್ ವರದಿ ಬರುವವರೆಗೂ ಯಾವುದೇ ಕ್ರೈಮ್ ನಡೆದಾಗ 24 ಗಂಟೆಯಿಂದ 48 ಗಂಟೆಗಳ ವರದಿ ಬಹಳ ಮುಖ್ಯ. ಮಾಧ್ಯಮಗಳಲ್ಲಿ ಬಂದಿರೋದನ್ನು ನೋಡಿದ್ದೇವೆ. ಪೋಸ್ಟ್ ಮಾರ್ಟಮ್ ವರದಿ ಬರುವ ಮೊದಲೇ ಪ್ರೈಮರಿ ವರದಿ ನಾಶ ಮಾಡಿದ್ದರು. ಸಿಬಿಐಗೆ ಪರೇಶ್ ಮೇಸ್ತ ಕೇಸ್ ವಹಿಸುವಾಗ, ಇಲ್ಲಿನ ಕಾಂಗ್ರೆಸ್ ಸರ್ಕಾರ ಏನೆಲ್ಲಾ ಮಾಡಿದೆ ಅನ್ನೋದು ನಮಗೆ ಗೊತ್ತಿದೆ. ಶರತ್ ಮಡಿವಾಳ ಹತ್ಯೆ ಆದಾಗ ನಾನು ಅವರ ಮನೆಗೆ ಹೋಗಿದ್ದೆ. ಶರತ್ ಮಡಿವಾಳ ಪೋಸ್ಟ್ ಮಾರ್ಟಮ್ ವರದಿ ಬಂದಿರಲಿಲ್ಲ. ಆಗ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿದ್ರು. ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಅಂತ ಶರತ್ ಶವವನ್ನೂ ಹಸ್ತಾಂತರ ಮಾಡಿರಲಿಲ್ಲ. ಈ ಎಲ್ಲಾ ವಿಚಾರ ಬಹಳ ಸ್ಪಷ್ಟವಾಗಿದೆ. ಈಗ ಯಾವುದೋ ರಿಪೋರ್ಟ್ ಬಂತು ಅಂತ 175 ಪಿಎಫ್ಐ, ಕೆಎಫ್ಡಿ ಕೇಸ್ ವಾಪಸ್ ಪಡೆದದ್ದು ಸುಳ್ಳಾಗಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಟಿಪ್ಪು ಜಯಂತಿ ಮಾಡಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದ್ದನ್ನು ಜನ ಮರೆಯಲು ಆಗಲ್ಲ. ಈಗ ಬಂದ ವರದಿ ಇವರಿಗೆ ಸಹಾಯಕ್ಕೆ ಬರಲ್ಲ. ಇಂದು ಕುಟ್ಟಪ್ಪ ಹತ್ಯೆಯಿಂದ ಹಿಡಿದು ರುದ್ರೇಶ್ ವರೆಗೂ ನೂರಕ್ಕೂ ಹೆಚ್ಚು ಹತ್ಯೆಗಳು ನಡೆದವು. ಯುಎಪಿಎ ಕೇಸ್ ಸರಿಯಾಗಿ ಹಾಕದೆ, ಅವರಿಗೆ ತಕ್ಷಣಕ್ಕೆ ಬೇಲ್ ಸಿಗುವಂತೆ ಮಾಡಿದರು. ಕಾಂಗ್ರೆಸ್ ನವರಿಗೆ ಪಿಎಫ್ಐ ಬ್ಯಾನ್ ಮಾಡಿರೋದು ಹೇಳಿಕೊಳ್ಳಲಾಗದಷ್ಟು ನೋವಾಗ್ತಿದೆ. ಅವರೇ ಹೇಳಿದ್ರು ಅವರೆಲ್ಲಾ ನಮ್ಮ ಬ್ರದರ್ಸ್ ಅಂತ. ಈಗ ಬ್ರದರ್ಸ್ ಬ್ಯಾನ್ ಮಾಡಿರೋದ್ರಿಂದ ನೋವಾಗಿದೆ. ಅದನ್ನು ಹೇಳಿಕೊಳ್ಳಲಾಗದೆ ಈಗ ಅವರನ್ನು ಪ್ರೋತ್ಸಾಹಿಸೋ ಕೆಲಸ ಮಾಡಲಾಗುತ್ತಿದೆ. ಸ್ಪಷ್ಟವಾಗಿ ಇದೆಲ್ಲವನ್ನೂ ಜನ ನೋಡುತ್ತಿದ್ದಾರೆ. ಈ ಹಿಂದೆಯೂ ಜನ ಪಾಠ ಕಲಿಸಿದ್ದರು, ಮುಂದೆಯೂ ಪಾಠ ಕಲಿಸಲಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
(ಓದಿ: ಪರೇಶ್ ಮೇಸ್ತ ಕೊಲೆ ಅಲ್ಲ, ಆಕಸ್ಮಿಕ ಸಾವು.. ಸಿಬಿಐ ವರದಿಗೆ ಪರೇಶ್ ತಂದೆ ಅಸಮಾಧಾನ)