ಬೆಂಗಳೂರು: ದಂಪತಿಯ ನಡುವಿನ ಮಕ್ಕಳ ಸುಪರ್ದಿಗೆ ವಹಿಸುವ ಪ್ರಕರಣಗಳಲ್ಲಿ ಸೋಲುವ ಪೋಷಕರಿಗೆ ಮಗುವಿನ ಭೇಟಿಗೆ ಸಾಕಷ್ಟು ಅವಕಾಶವನ್ನಾದರೂ ಕಲ್ಪಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತನ್ನ ಅಪ್ತಾಪ್ತ ಮಗನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅಪ್ತಾಪ್ತ ಮಗುವಿನ ಭೇಟಿ ಹಕ್ಕು, ಕಸ್ಟಡಿ ಮತ್ತು ಪೋಷಕತ್ವಕ್ಕೆ ಸಂಬಂಧಿಸಿದಂತೆ ಪತಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಪಾಲನೆ ಮಾಡಬೇಕು ಎಂದು ನ್ಯಾಯಾಲಯ ಪತ್ನಿಗೆ ನಿರ್ದೇಶನ ನೀಡಿದೆ. ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಹೈಕೋರ್ಟ್, ಯಶಿತಾ ಸಾಹು ವರ್ಸಸ್ ಸ್ಟೇಟ್ ಆಫ್ ರಾಜಸ್ಥಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದು, ಪ್ರಕರಣ ಸಂಬಂಧ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಂತೆ ಪತ್ನಿ, ಬೇಸಿಗೆ ರಜೆಯಲ್ಲಿ ಮಗುವನ್ನು ತಂದೆಯ ವಶಕ್ಕೆ ಒಪ್ಪಿಸಬೇಕು ಎಂದು ಆದೇಶಿಸಿದೆ.
ಮಗುವಿನ ಪೋಷಕತ್ವಕ್ಕೂ ಮಗುವಿನ ಕಸ್ಟಡಿಗೂ ವ್ಯತ್ಯಾಸವಿದೆ. ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಸೋಲುವ ಪೋಷಕರಿಗೆ ಸಾಕಷ್ಟು ಭೇಟಿಯ ಹಕ್ಕು ನೀಡಬೇಕಾಗುತ್ತದೆ. ಆ ಮೂಲಕ ಮಗು ತಂದೆಯ ಜತೆ ಸಾಮಾಜಿಕ, ಭೌತಿಕ ಸಂಪರ್ಕ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ. ತಂದೆಯೂ ಸಹ ರಜೆ ಪಡೆದು ಪೂರ್ಣ ಸಮಯವನ್ನು ಮಗುವಿನ ಜತೆ ಕಾಲ ಕಳೆಯಬೇಕಾಗುತ್ತದೆ. ಆ ಅವಧಿಯಲ್ಲಿ ಮಗುವಿನ ಅಜ್ಜಿ ಜತೆಯಲ್ಲಿರಬಹುದು.
ಪ್ರಕರಣದ ಹಿನ್ನೆಲೆ ಏನು ?: 2011ರಲ್ಲಿ ಬೆಂಗಳೂರಿನಲ್ಲಿ ಮದುವೆಯಾದ ದಂಪತಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ೨೦೧೪ರ ನಂತರ ಇಬ್ಬರೂ ಪರಸ್ಪರ ಪ್ರತ್ಯೇಕವಾಗಿ ನೆಲೆಸಿದ್ದರು. ನಂತರ ಪತ್ನಿ, ಸಿಆರ್ ಪಿಸಿ ಸೆಕ್ಷನ್ ೧೨೫ರಡಿ ತನಗೆ ಮತ್ತು ಮಗುವಿಗೆ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪತಿ ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಆ ವೇಳೆ ಇಬ್ಬರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳು ಮುಂದಾಗಿ ಒಪ್ಪಂದ ಮಾಡಿಕೊಂಡರು. ಅದರಂತೆ ಮಗುವನ್ನು ಪತ್ನಿಯ ಸುಪರ್ದಿಗೆ ನೀಡಿ, ಪತಿಗೆ ಮಗುವಿನ ಭೇಟಿ ಹಕ್ಕು ನೀಡಲಾಗಿತ್ತು.
ಆದರೆ ವಾರಾಂತ್ಯದಲ್ಲಿ ಮಗುವನ್ನು ಭೇಟಿ ಮಾಡಲು ಪತ್ನಿ ಅವಕಾಶ ನೀಡಲಿಲ್ಲ ಎಂದು ಪತಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಅಪ್ರಾಪ್ತೆ ಮೇಲೆ ಅತ್ಯಾಚಾರ - ವಿಚಾರಣಾಧೀನ ನ್ಯಾಯಾಲಯದ ಖುಲಾಸೆ ಆದೇಶ ರದ್ದು: ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರವೆಸಗಿ ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾಧೀನ ನ್ಯಾಯಾಲಯ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಮಡಿಕೇರಿಯ ಮಡೆ ಗ್ರಾಮದ ವಿಜಯ ಅಲಿಯಾಸ್ ವಿಜಯಕುಮಾರ್ ಎಂಬುವರನ್ನು ಕೊಡಗಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ರಾಜೇಂದ್ರ ಬದಾಮಿಕರ್ ಅವರ ನೇತೃತ್ವದ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಅಲ್ಲದೇ ಆತನಿಗೆ ಶಿಕ್ಷೆ ವಿಧಿಸಲು ಆದೇಶ ಮಾಡಿತು.
ಇದನ್ನೂ ಓದಿ:ಮೀಸಲಾತಿ ವರ್ಗೀಕರಣ ಪ್ರಶ್ನಿಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ ಸರ್ಕಾರ