ಬೆಂಗಳೂರು : ರಾಜ್ಯದಲ್ಲಿ ನಿಧಾನವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಬೆನ್ನಲ್ಲೇ ಪಾಸಿಟಿವಿಟಿ ರೇಟು ಕಡಿಮೆ ಇರುವ ಭಾಗದಲ್ಲಿ ಶಾಲಾ-ಕಾಲೇಜುಗಳನ್ನ ತೆರೆಯಲಾಗಿದೆ. ಮೊದಲ ಹಂತವಾಗಿ 9-12ನೇ ತರಗತಿ ಆರಂಭಿಸಿ ಯಶಸ್ವಿಯಾದ ಬಳಿಕ ಕಳೆದ ವಾರವಷ್ಟೇ 2ನೇ ಹಂತದಲ್ಲಿ 6-8ನೇ ತರಗತಿ ಶುರು ಮಾಡಲಾಗಿದೆ. ಇದೀಗ ಪ್ರಾಥಮಿಕ ತರಗತಿ ಅಂದರೆ 1 ರಿಂದ 5ನೇ ತರಗತಿಯನ್ನೂ ಶುರು ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಹಾಗೂ ತಂದೆ ತಾಯಿ ಇಬ್ಬರು ದುಡಿಯುವ ಪೋಷಕರಿಂದ ಒತ್ತಡ ಬಂದಿದೆ. ಇಬ್ಬರು, ಮೂವರು ಮಕ್ಕಳು ಇದ್ದವರು ದೊಡ್ಡವರು ಶಾಲೆಗೆ ಹೋದರೆ ಚಿಕ್ಕಮಕ್ಕಳನ್ನ ನೋಡಿಕೊಳ್ಳಲು ಯಾರೂ ಇಲ್ಲದಂತಾಗುತ್ತೆ. ಹೀಗಾಗಿ, ಆ ಮಕ್ಕಳಿಗೂ ಶಾಲೆ ಆರಂಭಿಸಿ ಎಂದು ಬೆಂಬಿಡದೇ ಕಾಡುತ್ತಿದ್ದಾರೆ ಅಂತಾರೆ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ.
ಕಳೆದೊಂದು ವಾರದಿಂದ ಪಾಸಿಟಿವಿಟಿ ದರ ಶೇ.1ಕ್ಕಿಂತಲೂ ಕಡಿಮೆ ಬರ್ತಿದೆ. ಹೀಗಾಗಿ, ಪಾಳಿ ಪದ್ಧತಿಯಲ್ಲಿಯಾದರೂ ಪ್ರಾಥಮಿಕ ತರಗತಿ ಆರಂಭಕ್ಕೆ ಸರ್ಕಾರ ಮುಂದಾಗಬೇಕು ಅಂತಾ ಮನವಿ ಮಾಡಿದ್ದಾರೆ. ಚಿಕ್ಕ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಹೋಗಲು ಆಗದೇ, ಪೋಷಕರೇ ಬಂದು ಮಕ್ಕಳನ್ನ ಶಾಲೆಗೆ ಬಿಟ್ಟು ಹೋಗ್ತಿದ್ದಾರೆ. ಇಲ್ಲಿ ಮಾನವೀಯತೆ ಪ್ರಶ್ನೆ ಬರುತ್ತೆ, ಶಾಲಾಡಳಿತ ಇಕ್ಕಟಿಗೆ ಸಿಲುಕಿದೆ ಎಂದು ಲೋಕೇಶ್ ವಿವರಿಸಿದರು.
ಸರ್ಕಾರ ಕೂಡಲೇ ಆದೇಶ ಮಾಡಿ, ಪಾಳಿಯಲ್ಲೋ, ವಿದ್ಯಾಗಮದ ರೂಪದಲ್ಲೋ ತರಗತಿ ಆರಂಭಿಸಬೇಕು. 18 ತಿಂಗಳಾದರೂ ಮಕ್ಕಳು ತರಗತಿ ಮುಖವೇ ನೋಡಿಲ್ಲ, ಮಕ್ಕಳು ಶಾಲೆಗೆ ಬರಲು ಉತ್ಸಾಹದಲ್ಲಿದ್ದು, ಅದನ್ನ ತಡೆಯಲು ಆಗ್ತಿಲ್ಲ. ಆದರೆ, ನಮಗೆ ಕಾನೂನು ಅಡ್ಡ ಬರ್ತಿದೆ. ಹೀಗಾಗಿ, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಪ್ರಾಥಮಿಕ ಶಾಲೆ ಪುನಾರಂಭಿಸಬೇಕು, ಕೊರೊನಾ ಸೋಂಕು ಕಂಡು ಬಂದರೆ ಶಾಲೆಯನ್ನ ವಾರದ ಮಟ್ಟಿಗೆ ಮುಚ್ಚೋಣ ಎಂದು ಮನವಿ ಮಾಡಿದರು.
ಇದನ್ನೂ ಓದಿ:ರಾಜ್ಯದಲ್ಲಿಂದು ಕೊರೊನಾ ಸೋಂಕು ಭಾರಿ ಇಳಿಕೆ : 673 ಮಂದಿಗೆ ಕೋವಿಡ್,13 ಸೋಂಕಿತರ ಸಾವು