ಬೆಂಗಳೂರು: ಸಂಕ್ರಾಂತಿಗೆ ಸಂಪುಟ ಸರ್ಜರಿಯಾಗಲಿದೆ ಎಂದು ಕಾದು ಕುಳಿತು ನಿರಾಶರಾಗಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳು, ಇಂದು ಮುಖ್ಯಮಂತ್ರಿಗಳ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಸಿಎಂ ನಿವಾಸಕ್ಕೆ ದೌಡಾಯಿಸಿದರು. ದೆಹಲಿ ಪ್ರವಾಸದ ಬಗ್ಗೆ ಅನೌಪಚಾರಿಕ ಮಾತುಕತೆ ನಡೆಸಿ, ಸಂಪುಟ ಸೇರ್ಪಡೆ ಕುರಿತು ತಮ್ಮ ಇಂಗಿತವನ್ನು ಸಿಎಂ ಗಮನಕ್ಕೆ ತರುವ ಪ್ರಯತ್ನ ನಡೆಸಿದರು.
ರಾಜ್ಯ ರಾಜಕೀಯದಲ್ಲಿ ಸದ್ಯ ನಾಯಕತ್ವ ಬದಲಾವಣೆ ವಿಚಾರ ತಣ್ಣಗಾಗುತ್ತಿದ್ದಂತೆ, ಸಂಪುಟ ವಿಸ್ತರಣೆ ವಿಷಯ ಮುನ್ನಲೆಗೆ ಬಂದಿದೆ. ಆಕಾಂಕ್ಷಿತ ಶಾಸಕರು ಸಿಎಂ ಬೊಮ್ಮಾಯಿ ಕ್ಯಾಬಿನೆಟ್ಗೆ ಎಂಟ್ರಿಕೊಡಲು ನಾ ಮುಂದು ತಾ ಮುಂದು ಎಂದು ಲಾಬಿ ಆರಂಭಿಸಿದ್ದಾರೆ. ಕೋವಿಡ್ ಪಾಸಿಟಿವ್ನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಸಿಎಂ ಮರಳುತ್ತಿದ್ದಂತೆ ಸಾಲು ಸಾಲು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ಉದ್ಯೋಗ ನೀತಿಯಿಂದ ಯುವಕರ ಬದುಕು ಹಸನಾಗಲಿದೆ: ಸಿಎಂ ಬೊಮ್ಮಾಯಿ
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದು, ಬಿಜೆಪಿ ಕಚೇರಿಗೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಮಾತುಕತೆ ನಡೆಸುತ್ತಿದ್ದಂತೆ ಅಲರ್ಟ್ ಆಗಿರುವ ಸಚಿವಾಕಾಂಕ್ಷಿಗಳು ಇಂದು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸಿಎಂ ದೆಹಲಿಗೆ ತೆರಳಲಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿರುವುದೂ ಇದಕ್ಕೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿರುವ ಶಾಸಕರಾದ ರಾಮದಾಸ್, ರಾಜುಗೌಡ, ಸಿದ್ದು ಸವದಿ, ಅಪ್ಪಚ್ಚು ರಂಜನ್, ಶಿವರಾಜ್ ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಅರವಿದ ಬೆಲ್ಲದ್, ಎಂ ಎಲ್ ಸಿ ಭಾರತೀ ಶೆಟ್ಟಿ ಸೇರಿದಂತೆ ಹಲವು ಶಾಸಕರು ಸಿಎಂ ಭೇಟಿ ಮಾಡಿ ತೆರೆಳಿದ್ದಾರೆ. ನಿನ್ನೆ ಎಂಎಲ್ಸಿ ಸಿ.ಪಿ. ಯೋಗೇಶ್ವರ್, ಶಾಸಕ ಸೋಮೇಶ್ವರ ರೆಡ್ಡಿ ಸೇರಿದಂತೆ ಒಂದಷ್ಟು ಶಾಸಕರು ಕ್ಷೇತ್ರದ ಕೆಲಸ ಅನ್ನೋ ನೆಪದಲ್ಲಿ ಬಂದು ತಮಗೆ ಸಂಪುಟದಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದರ ನಡುವೆ ಮತ್ತೊಂದು ಕಡೆ ಶತಾಯಗತಾಯವಾಗಿ ಒಂದೂವರೆ ವರ್ಷವಾದ್ರು ಸಚಿವ ಸ್ಥಾನ ಅಲಂಕರಿಸಲೇಬೇಕು ಎಂದು ಪಣ ತೊಟ್ಟಿರುವ ರೇಣುಕಾಚಾರ್ಯ, ತಮ್ಮ ರಾಜಕೀಯ ಗುರು ಯಡಿಯೂರಪ್ಪ ಅವರ ಕಟ್ಟಾ ವಿರೋಧಿಯಾಗಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಇದೀಗ ಕೈ ಜೋಡಿಸಿ ಅಚ್ಚರಿ ಮೂಡಿಸಿದ್ದಾರೆ. ಇಬ್ಬರು ಒಟ್ಟಿಗೆ ಸೇರಿ ಬೊಮ್ಮಯಿ ಕ್ಯಾಬಿನೆಟ್ಗೆ ಎಂಟ್ರಿಯಾಗಾಲೇ ಬೇಕು ಅಂತ ಹೇಳಿ ಸಿಎಂ ಮುಂದೆ ಬೇಡಿಕೆ ಮಂಡಿಸಿ ದೆಹಲಿಯಾತ್ರೆಗೂ ಸಿದ್ಧಗೊಂಡಿದ್ದಾರೆ.
ಸಚಿವರಿಂದಲೂ ಸಿಎಂ ಭೇಟಿ:
ರೇಸ್ ಕೋರ್ಸ್ ನಿವಾಸಕ್ಕೆ ಸಚಿವರಾದ ಅರಗ ಜ್ಞಾನೇಂದ್ರ, ಅಶ್ವತ್ಥನಾರಾಯಣ, ಆರ್. ಅಶೋಕ್, ಗೋವಿಂದ ಕಾರಜೋಳ, ಬಿ.ಸಿ ಪಾಟೀಲ್, ಮುರುಗೇಶ್ ನಿರಾಣಿ, ವಿ. ಸೋಮಣ್ಣ ಭೇಟಿ ನೀಡಿದರು. ಕೋವಿಡ್ನಿಂದ ಗುಣಮುಖರಾಗಿ ಬಂದ ಬೊಮ್ಮಾಯಿ ಯೋಗಕ್ಷೇಮ ವಿಚಾರಿಸಿ ಕೆಲಕಾಲ ರಾಜಕೀಯ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.