ಬೆಂಗಳೂರು: ಡಿ.ಜೆ.ಹಳ್ಳಿಯಲ್ಲಿ ಗಲಭೆ ಪ್ರಕರಣ ನಡೆದ ನಂತರ ಈಗ ಆ ಪ್ರದೇಶವು ಕೊಂಚ ವಾಸ್ತವ ಸ್ಥಿತಿಯತ್ತ ಬರುತ್ತಿದೆ. ಸದ್ಯ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ಮಧ್ಯೆ ಮತ್ತೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕೆಯಾಗಿ ಆರ್ಎಎಫ್ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಲಾಗಿದೆ.
ಘಟನೆ ನಡೆದಾಗ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಲು ಹೈದರಾಬಾದ್ನಿಂದ ಆಗಮಿಸಿದ ಆರ್ಎಎಫ್ ತಂಡ ನಗರದಲ್ಲೇ ಬೀಡು ಬಿಟ್ಟಿದೆ. ಸದ್ಯ ಕೈಯಲ್ಲಿ ಗನ್ ಹಿಡಿದು ಸುತ್ತುತ್ತಿರುವ ರಕ್ಷಣಾ ಪಡೆ ಸಿಬ್ಬಂದಿ, ಪುಢಾರಿಗಳು ಬಾಲಬಿಚ್ಚದ ಹಾಗೆ ನೋಡಿಕೊಳ್ಳಲು ಪಥ ಸಂಚಲನ ಮಾಡಿದ್ದಾರೆ. ಹಾಗೆಯೇ ಅನುಮಾನಾಸ್ಪದ ವ್ಯಕ್ತಿಗಳನ್ನು ಹಿಡಿದು ವಿಚಾರಣೆ ಕೂಡ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಗಲಭೆಗೆ ಸಂಬಂಧಿಸಿದಂತೆ ಡಿ.ಜೆ. ಹಳ್ಳಿ ಠಾಣಾ ಪೊಲೀಸರು ಎಫ್ಐಆರ್ ಆಧಾರದ ಮೇರೆಗೆ ತನಿಖೆ ನಡೆಸುತ್ತಿದ್ದು, ಈ ವೇಳೆ ಕೆಲ ಸಾಕ್ಷಿಗಳ ವಿಚಾರಣೆ ಅಗತ್ಯವಿದೆ. ಹೀಗಾಗಿ ಠಾಣೆಯ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.