ಬೆಂಗಳೂರು: ನಗರದ ಸ್ವತಂತ್ರ್ಯ ಉದ್ಯಾನದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಸಮುದಾಯದ ಹೋರಾಟ ಅಂತ್ಯಗೊಂಡಿದೆ. ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ 2ಡಿ ಅಡಿಯಲ್ಲಿ ಶೇ.7ರಷ್ಟು ಮೀಸಲಾತಿಯನ್ನು ನೀಡಿ ಆದೇಶ ಹೊರಡಿಸಿದೆ. ಆದರೆ ಸಮುದಾಯದ ಮುಖಂಡರು ಶೇ.15ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದರು. ಚುನಾವಣೆ ತಂತ್ರಕ್ಕಾಗಿ ಸರ್ಕಾರ 2ಡಿ ಹೆಸರಲ್ಲಿ ಶೇ.7ರಷ್ಟು ಮೀಸಲಾತಿ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ನಂತರ ಪ್ರತಿಭಟನೆ ಅಂತ್ಯಗೊಂಡಿದೆ ಎಂದು ಘೋಷಿಸಲಾಯಿತು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಜನರು ಪ್ರಮುಖವಾಗಿ ಇಡೀ ಉತ್ತರ ಕರ್ನಾಟಕದ ಭಾಗದವರು ಕಳೆದ ಎರಡು ವರ್ಷಗಳಿಂದ ಊಟದ ಬುತ್ತಿ ತೆಗೆದುಕೊಂಡು ಮನೆ ಮಠ ಬಿಟ್ಟು ಮೀಸಲಾತಿಗಾಗಿ ಆಗ್ರಹಿಸಿ ನನ್ನೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಯಾವ ಸ್ವಾಮೀಜಿಗೂ ಸಿಗದ ದೊಡ್ಡ ಮಟ್ಟದ ಬೆಂಬಲವನ್ನು ಜನ ನನಗೆ ನೀಡಿದ್ದಾರೆ. ಕಾರಣ ನಮ್ಮ ಸಮುದಾಯದ ಸ್ವಾಮೀಜಿ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿದ್ದಾರೆ ಎಂಬುದನ್ನು ಅರಿತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭ ಬಾವುಕರಾಗಿ ಶ್ರೀಗಳು ಕಣ್ಣೀರಿಟ್ಟರು.
ಇಷ್ಟು ವರ್ಷಗಳ ನಿರಂತರ ಹೋರಾಟದ ಪರಿಣಾಮವಾಗಿ ಪಂಚಮಸಾಲಿ ಸಮುದಾಯಕ್ಕೆ ಸ್ವಲ್ಪಮಟ್ಟಿನ ಮೀಸಲಾತಿ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ಮೊದಲ ಹೆಜ್ಜೆಯ ಸಾಧನೆಯಾಗಿ ಶೇ.7ರಷ್ಟು ಮೀಸಲಾತಿ ಸಿಕ್ಕಿದೆ. ಸರ್ಕಾರ ಶೇ.7ರಷ್ಟು ಮೀಸಲಾತಿ ಘೋಷಿಸಿದೆ. ಮುಂದಿನ ದಿನಗಳಲ್ಲಿ ಯಾವ ಸರ್ಕಾರ ಬರಲಿದೆ ಎಂಬುದನ್ನು ನೋಡಿಕೊಂಡು ಎಲ್ಲರೂ ಚರ್ಚೆ ನಡೆಸಿ ಮತ್ತೆ ಹೋರಾಟ ನಡೆಸೋಣ, ಪ್ರಸ್ತುತ ಈ ಹೋರಾಟ ಇಲ್ಲಿಗೆ ನಿಲ್ಲಿಸೋಣ ಎಂದು ಕರೆ ನೀಡಿದರು.
ಕಾಶಪ್ಪನವರ್ ರಾಜೀನಾಮೆ: ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಕೇವಲ ಶೇ.7ರಷ್ಟು ಮೀಸಲಾತಿಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಚುನಾವಣೆಗೋಸ್ಕರ ಮಾಡಿರುವ ತಂತ್ರ ಎಂಬುದು ಗೊತ್ತಾಗುತ್ತಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕ್ರಮದಿಂದಾಗಿ ಬೇಸರಗೊಂಡು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ವಿಜಯಾನಂದ ಕಾಶಪ್ಪನವರ್, ನಿನ್ನೆ ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಎಂಬ ಹೆಸರಿನಡಿ ಶೇ.7ರಷ್ಟು ಮೀಸಲಾತಿ ಘೋಷಣೆ ಮಾಡಿದೆ. ಈ ಮೀಸಲಾತಿಯನ್ನು ಒಪ್ಪಲು ಸಾಧ್ಯವಿಲ್ಲ. ನಾವು ಕೇಳಿದ್ದು ಶೇ.15ರಷ್ಟು ಮೀಸಲಾತಿ. ಆದರೆ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಮೀಸಲಾತಿ ಹೆಚ್ಚಿಸದೇ ಈಗ ಚುನಾವಣಾ ತಂತ್ರ ಎಂಬಂತೆ ಕೇವಲ 7ರಷ್ಟು ಮೀಸಲಾತಿ ನೀಡಿದೆ. ನಾವು ಕೇಳಿದಷ್ಟು ಮೀಸಲಾತಿ ನೀಡದಿದ್ದರೆ ಸರ್ಕಾರದ ಕ್ರಮವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.
ಸರ್ಕಾರ ಶುಕ್ರವಾರ ಮೀಸಲಾತಿ ಪ್ರಕಟಿಸಿದ ಹಿನ್ನೆಲೆಯಲ್ಲಿ, ಫ್ರೀಡಂ ಪಾರ್ಕ್‍ನಲ್ಲಿ ಪಂಚಮಸಾಲಿ ಮುಖಂಡರು ಹಾಗೂ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕುರಿತಾಗಿ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರತಿಭಟನೆ ಕೈಬಿಡಲು ನಿರ್ಧರಿಸಲಾಯಿತು. ಆದರೆ ಇದಕ್ಕೆ ವಿಜಯಾನಂದ ಕಾಶಪ್ಪನವರ್ ವಿರೋಧ ವ್ಯಕ್ತಪಡಿಸಿದರು.
ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಾವು ಕೇಳಿರುವುದು 15% ಮೀಸಲಾತಿ. ಆದರೆ ಈಗ 7% ನೀಡಲಾಗಿದೆ. ಇದು ಚುನಾವಣಾ ತಂತ್ರ ಆಗಿರಬಹುದು. ನೋಟಿಫಿಕೇಶನ್ ಆಗಲಿ. ಬೇರೆ ಸಮುದಾಯದಿಂದ ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ಈಗ ಕೇವಲ 2% ಮಾತ್ರ ಮೀಸಲಾತಿ ಸಿಕ್ಕಂತಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ಕೊಟ್ಟಿದ್ದಾರೆ. ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರವಾಗಿ ವಿಜಯಾನಂದ ಹಾಗೂ ಯತ್ನಾಳ್ ನಡುವೆ ವಾಕ್ಸ್‌ಮರ ನಡೆಯಿತು.
ಇದನ್ನೂ ಓದಿ: ಮೀಸಲಾತಿ ಕುರಿತ ಸರ್ಕಾರದ ನಿರ್ಣಯದ ಬಗ್ಗೆ ನಾಳೆ ಚರ್ಚಿಸಿ ತೀರ್ಮಾನ: ಬಸವಜಯ ಮೃತ್ಯುಂಜಯ ಸ್ವಾಮೀಜಿ